– 40ಕ್ಕೂ ಅಧಿಕ ಮಂದಿ ಗಂಭೀರ
– ಹಾರ್ನ್ ಮಾಡಿದ್ರೂ ಕೇಳಿಸಿಕೊಳ್ಳದ ಚಾಲಕ
ಬ್ಯಾಂಕಾಕ್: ಧಾರ್ಮಿಕ ಸಮಾರಂಭಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸಿಗೆ ಸರಕು ರೈಲು ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.
Advertisement
ಇಂದು ಬೆಳಗ್ಗೆ ಪೂರ್ವ ಬ್ಯಾಂಕಾಕ್‍ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಚಾಚೊಂಗ್ಸಾವೋ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ನಾಲ್ವರು ಸ್ಥಿತಿ ಗಂಭೀರವಾಗಿದೆ ಮತ್ತು ಎಂಟು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಛೋಂಬರಿ ಪ್ರಾಂತ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 60 ಸಿಬ್ಬಂದಿ ಸಮುತ್ ಪ್ರಕಾನ್ ಪ್ರಾಂತ್ಯದ ಬೌದ್ಧ ದೇವಾಲಯವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೈಲು ಬರುವ ಮುನ್ಸೂಚನೆಯಿದ್ದರೂ ಬಸ್ ಚಾಲಕ ಖ್ಲಾಂಗ್ ಕ್ವಾಂಗ್ ಕ್ಲಾನ್ ಜಿಲ್ಲೆಯ ನಿಲ್ದಾಣದ ಬಳಿ ರೈಲ್ವೆ ಕ್ರಾಸಿಂಗ್ ಮೇಲೆ ಹೋಗಿದ್ದಾನೆ. ಅಲ್ಲದೇ ಬರುತ್ತಿದ್ದ ರೈಲು ಹಾರ್ನ್ ಮಾಡಿದರೂ ಚಾಲಕ ಕೇಳಿಸಿಕೊಳ್ಳಲಿಲ್ಲ. ಪರಿಣಾಮ ವೇಗವಾಗಿ ಬಂದ ರೈಲು ಬಸ್ಸಿಗೆ ಡಿಕ್ಕಿ ಹೊಡೆದಿದೆ.
Advertisement
ಪರಿಣಾಮ ಎಂಟು ಪುರುಷರು ಮತ್ತು 10 ಮಹಿಳೆಯರು ಸಾವನ್ನಪ್ಪಿದ್ದು, 40ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮಾಡುತ್ತಿವೆ. ಬಸ್ಸಿನಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.