ಬಸಿ ನೀರಿನಿಂದ ಮನೆಯೊಳಗೆ ಭೂಮಿ ಕುಸಿತ – ಗ್ರಾಮದ ನೆಮ್ಮದಿ ಕಸಿದುಕೊಂಡ ಗುಂಡಿಗಳು

Public TV
1 Min Read
rcr

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮಸೀದಪುರ ಗ್ರಾಮಕ್ಕೆ ಅದ್ಯಾವ ಶಾಪ ತಗುಲಿದೆಯೋ ಗೊತ್ತಿಲ್ಲ. ರಾತ್ರಿಯಾದ್ರೆ ಸಾಕು ಜನ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವೇ ಇಲ್ಲ. ಅದ್ಯಾವಾಗ ಭೂಮಿ ಬಾಯಿ ತೆರೆದು ಯಾರನ್ನು ಬಲಿ ಪಡೆಯುತ್ತೋ ಅನ್ನೋ ಭಯ ಗ್ರಾಮಸ್ಥರನ್ನ ಕಾಡುತ್ತಿದೆ. ಗ್ರಾಮದಲ್ಲಿನ ಅಗೆವುಗಳ (ಕಣಜ) ಕುಸಿತದಿಂದ ಜನ ಕಂಗೆಟ್ಟು ಹೋಗಿದ್ದಾರೆ.

ಇಲ್ಲಿ ಯಾವುದೇ ಮನೆಗೆ ಹೋದರೂ ಆತಂಕದಲ್ಲಿರುವ ಜನರೇ ಕಾಣಸಿಗುತ್ತಾರೆ. ಗ್ರಾಮ ಅರ್ಧದಷ್ಟು ಮನೆಗಳು ಬಾಯಿತೆರೆದು ಮನೆಯ ಸಾಮಾನುಗಳನ್ನೆಲ್ಲಾ ನುಂಗಿ ಹಾಕಿವೆ. ಗ್ರಾಮದಲ್ಲಿನ 500 ಮನೆಗಳಲ್ಲಿ 300ಕ್ಕೂ ಅಧಿಕ ಮನೆಗಳಲ್ಲಿ ಏಕಾಏಕಿ ಕೋಣೆಗಳಲ್ಲಿ ಕುಸಿತವಾಗಿವೆ. ಕಳೆದ ಹತ್ತು ವರ್ಷಗಳಿಂದ ಮನೆಗಳು ಕುಸಿಯುತ್ತಿದ್ದು ಈ ಬಾರಿ ಸುರಿದ ನಿರಂತರ ಮಳೆಯಿಂದಾಗಿ ಸುಮಾರು 20 ಮನೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಬಾಯ್ತೆರೆದ ಭೂಮಿಯೊಳಗೆ ಮಂಚ, ಪಾತ್ರೆ ಪಗಡೆಗಳು ಹಾಗೂ ದವಸ ಧಾನ್ಯಗಳು ಮುಚ್ಚಿಹೋಗಿವೆ.

rcr 2 1

ಹಿಂದೆ ಹಿರಿಯರು ದವಸ ಧಾನ್ಯಗಳನ್ನ ಸಂಗ್ರಹಿಸಿಡಲು ಮನೆ ತಲೆಬಾಗಿಲು ಮುಂದೆ, ಕೋಣೆಯೊಳಗೆ, ಮನೆಯ ಅಂಗಳದಲ್ಲಿ ನಿರ್ಮಿಸಿದ್ದ ಅಗೆವುಗಳು ಈಗ ಕುಸಿಯುತ್ತಿವೆ. ಅಗೆವುಗಳನ್ನ ಮಣ್ಣಿನಿಂದ ಸಂಪೂರ್ಣ ಮುಚ್ಚಿದ್ದರೂ ಗ್ರಾಮದಲ್ಲಿ ಮಳೆ ನೀರಿನ ಬಸಿ ಹಾಗೂ ನೀರಾವರಿಯಿಂದಾಗಿ ಅಗೆವುಗಳು ಕುಸಿಯುತ್ತಿವೆ. ಇದರಿಂದ ಮನೆಯೊಳಗೆ 18 ರಿಂದ 20 ಅಡಿ ಆಳದ ದೊಡ್ಡ ಗುಂಡಿಗಳು ಬೀಳುತ್ತಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

rcr 3

ಗ್ರಾಮ ತಗ್ಗು ಪ್ರದೇಶದಲ್ಲಿದ್ದು ಮಳೆಗಾಲದಲ್ಲಿ ಪ್ರತಿ ವರ್ಷ ಇಲ್ಲಿನ ಮನೆಗಳಲ್ಲಿನ ಅಗೆವುಗಳು ಕುಸಿಯುತ್ತಿವೆ. ಗ್ರಾಮದಲ್ಲಿ ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಪ್ರತಿದಿನ ಪ್ರತಿಕ್ಷಣ ಜನ ಉಸಿರು ಬಿಗಿ ಹಿಡಿದೇ ಬದುಕಬೇಕಾದ ಪರಸ್ಥಿತಿಯಿದೆ. ಹೀಗಾಗಿ ಗ್ರಾಮವನ್ನ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಆದ್ರೆ ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಮಳೆ ನಿಂತು ಒಂದು ವಾರ ಕಳೆದರೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಮುಂದೆ ಯಾವುದೇ ದೊಡ್ಡ ಅನಾಹುತ ಸಂಭವಿಸುವುದರೊಳಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ಕುಸಿದ ಮನೆಗಳಲ್ಲೇ ಬದುಕು ನಡೆಸಿರುವ ಗ್ರಾಮಸ್ಥರು ಸರ್ಕಾರ ನಮಗೆ ಶಾಶ್ವತ ಪರಿಹಾರ ಒದಗಿಸಬೇಕು ಅಂತ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *