ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಚರ್ಚೆ ಇಲ್ಲದೆ ಬೊಮ್ಮಾಯಿ ಹೆಸರನ್ನು ಘೋಷಣೆ ಮಾಡಲಾಗಿದ್ದು, ಇದಕ್ಕೆ ಗೋವಿಂದ ಕಾರಜೋಳ ಅನುಮೋದನೆ ನೀಡಿದ್ದಾರೆ.
ನಾಳೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆಯಿಂದಾಗಿ ಸಂಪುಟ ವಿಸರ್ಜನೆಯಾಗಿದ್ದು, ಯಾರಿಗೆ ಲಕ್? ಯಾರಿಗೆ ಶಾಕ್ ಎದುರಾಗುತ್ತೆ ಅನ್ನೋದರ ಬಗ್ಗೆ ಕುತೂಹಲ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.
Advertisement
Advertisement
ಇಂದು ಸಂಜೆ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಈ ಹೆಸರನ್ನು ಅಂತಿಮಗೊಳಿಸಲಾಯಿತು. ಸೋಮವಾರ ಬಿಜೆಪಿ ಸರ್ಕಾರ ರಚನೆಯಾದ ಎರಡು ವರ್ಷದ ಸಂಭ್ರಮಾಚರಣೆಯಲ್ಲಿಯೇ ಬಿ.ಎಸ್.ಯಡಿಯೂರಪ್ಪ ಅವರು ಗದ್ಗದಿತರಾಗಿಯೇ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿ, ತದನಂತರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದರು.
Advertisement
Advertisement
ಆ ಬಳಿಕದಿಂದ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿತ್ತು. ಮುಂದಿನ ಸಿಎಂ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ರಾಜ್ಯಕ್ಕೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಅವರನ್ನು ಕಳುಹಿಸಿತ್ತು. ಇದಕ್ಕೂ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಹಂಗಾಮಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ತದನಂತರ ನೇರವಾಗಿ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿಯ ಸಭೆಗೆ ಹಾಜರಾಗಿದ್ರು.
ಹೈಕಮಾಂಡ್ ವೀಕ್ಷಕರ ಜೊತೆ ಸಿಎಂ ಅಭ್ಯರ್ಥಿ ಬಸವರಾಜ ಬೊಮ್ಮಾಯಿ#BasavarajBommai #BSYediyurappa #BJP #KarnatakaBJP pic.twitter.com/I90TT0g5rd
— PublicTV (@publictvnews) July 27, 2021
ಇನ್ನು ವೀಕ್ಷಕರಾಗಿ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಸಹ ಮೊದಲಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ವೀಕ್ಷಕರ ಜೊತೆಯಲ್ಲಿಯೇ ಯಡಿಯೂರಪ್ಪ ಶಾಸಕಾಂಗ ಸಭೆಗೆ ಆಗಮಿಸಿದರು. ಕಾರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಯಡಿಯೂರಪ್ಪ ವಿಜಯದ ಸಂಕೇತ ತೋರಿಸಿ ಮುಗಳ್ನಗೆ ಬೀರಿ ಸಭೆಗೆ ಹೋದರು. ಇದೀಗ ಈ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು.