ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯ ಹೆಸರನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು. ಜೆಡಿಎಸ್ ನಿಂದ ಸೈಯದ್ ಉಸ್ರಾದ್ ಅಲಿ ಖಾದ್ರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸೈಯದ್ ಉಸ್ರಾದ್ ಅಲಿ ಖಾದ್ರಿ ಅವರು ಬಸವಕಲ್ಯಾಣದ ಅಝರತ್ ಶಾ ಮದರಸದ ವಂಶಸ್ಥರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ಎರಡ್ಮೂರು ದಿನಗಳಿಂದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಶೀಘ್ರದಲ್ಲಿಯೇ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ನಮ್ಮ ರಾಷ್ಟ್ರೀಯ ಅಧ್ಯಕ್ಷರು ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕುವ ತೀರ್ಮಾನ ಮಾಡಿದ್ದು, ಸೋಲು ಗೆಲುವು ಸಮಚಿತ್ತದಿಂದ ತೆಗೆದುಕೊಳ್ಳಬೇಕು. ಅತಿ ಹೆಚ್ಚು ಉಪ ಚುನಾವಣೆ ನಡೆಸಿರುವುದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ರೆ ನಾನೇ ಇರಬೇಕು. ನನಗೂ ಅನುಭವ ಇದೆ. ನಾವು ಎರಡೂ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆರ್ಥಿಕ ಕುತಂತ್ರದಿಂದ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತಾರೆ. ಎರಡು ಪಕ್ಷದವರು ಏನೇ ಆರ್ಥಿಕ ಕುತಂತ್ರ ಮಾಡಿದ್ರು ನಾವು ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.