ಬೆಂಗಳೂರು: ಬಸವಕಲ್ಯಾಣದ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ವೈರಸ್ ತಗುಲಿದ ಕಾರಣ ನಾರಾಯಣ ರಾವ್ ಅವರನ್ನು ಸೆಪ್ಟೆಂಬರ್ 1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಇದರಿಂದ ಅವರಿಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ಮಧ್ಯಾಹ್ನ 3.55ಕ್ಕೆ ಅವರು ನಿಧಾನರಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ. ಮನಿಷ್ ರೈ ತಿಳಿಸಿದ್ದಾರೆ.
Advertisement
Advertisement
66 ವರ್ಷದ ನಾರಾಯಣರಾವ್‍ಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಇತ್ತು. ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಅವರ ಸ್ಥಿತಿ ಗಂಭೀರವಾಗಿತ್ತು. ಅಂದಿನಿಂದ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅವರಿಗೆ ಬಹುಅಂಗಾಂಗ ವೈಫಲ್ಯ ಕಾಣಿಸಿಕೊಂಡಿತ್ತು. ಇದರಿಂದ ಮಣಿಪಾಲ್‍ನ ವಿಶೇಷ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ 24 ದಿನ ಕೊರೊನಾ ವಿರುದ್ಧ ಹೋರಾಡಿದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಮೊದಲು ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಬಿ ನಾರಾಯಣರಾವ್, 1982 ಮೊದಲ ಬಾರಿಗೆ ಮಾಳೆಗಾಂವ್ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಎಸ್.ಎಂ ಕೃಷ್ಣ ಸರ್ಕಾರದಲ್ಲಿ 2 ವರ್ಷ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿದ್ದರು. 2013ರಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು.
ಮಾಜಿ ಸಿಎಂಗಳಾದ ಡಿ.ದೇವರಾಜ್ ಅರಸ್, ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ರಾವ್ ಗುರುತಿಸಿಕೊಂಡಿದ್ದರು. ಕೋಳಿ ಸಮಾಜದಲ್ಲಿ ಹುಟ್ಟಿದ ಅವರು ಬಿಎ ಪದವಿ ಪಡೆದಿದ್ದರು. ಮರಾಠಿ, ಹಿಂದೆ, ಇಂಗ್ಲಿಷ್, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಮಾತನಾಡುತ್ತಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಲ್ಲಿ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವವಹಿಸಿದ್ದರು.