– ಉಮೇಶ್ ಕತ್ತಿ ನೀಡಿದ ಹೇಳಿಕೆ ತಪ್ಪು
ಬೆಂಗಳೂರು: ಬಳ್ಳಾರಿ ಜಿಲ್ಲೆಗೆ ಸಚಿವ ಆನಂದ್ ಸಿಂಗ್ ಉಸ್ತುವಾರಿ ಆಗಲು ನಾವು ಬಿಡಲ್ಲ. ಬೇಕಿದ್ದಲ್ಲಿ ನೂತನ ಜಿಲ್ಲೆ ವಿಜಯನಗರದ ಉಸ್ತುವಾರಿನ್ನ ಆನಂದ್ ಸಿಂಗ್ ನೋಡಿಕೊಳ್ಳಲಿ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಎಲ್ಲ ಶಾಸಕರು ಪತ್ರ ಬರೆಯಲಿದ್ದೇವೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಬಳ್ಳಾರಿ ವಿಭಜನೆಯ ಆದೇಶ ಹಿಂಪಡೆಯುವಂತೆ ಶೀಘ್ರವೇ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇವೆ. ಈಗಾಗಲೇ ಬಳ್ಳಾರಿ ವಿಭಜನೆ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಅವರ ಬೆಂಬಲಕ್ಕೆ ನಾವಿದ್ದೇವೆ. ಬಳ್ಳಾರಿಯಿಂದ ನೂರು ಜನರ ಸಮಿತಿಯೊಂದಿಗೆ ಸಿಎಂ ಅವರನ್ನ ಭೇಟಿಯಾಗಿ ವಿಭಜನೆಯಿಂದಾಗುವ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಆದೇಶವನ್ನ ಹಿಂಪಡೆಯುವ ವಿಶ್ವಾಸವಿದೆ ಎಂದರು.
ಬಳ್ಳಾರಿ ವಿಭಜನೆ ಆಗುತ್ತಿದ್ದಂತೆ ನೆರೆಯ ರಾಯಲಸೀಮೆಯ ಕೆಲವರು ಜಿಲ್ಲೆ ನಮಗೆ ಸೇರಬೇಕೆಂದು ಹೇಳಿಕೆ ನೀಡಿರೋದು ಗಮನಕ್ಕೆ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಳಗಾವಿಯಂತೆ ಬಳ್ಳಾರಿ ಆಗೋದು ಬೇಡ. ಬಳ್ಳಾರಿ ಕರ್ನಾಟಕದಲ್ಲಿರಬೇಕು ಎಂಬುವುದು ಅಖಂಡ ಜಿಲ್ಲೆಯ ಬಯಸುತ್ತಿರುವ ಜನರ ಆಸೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್, ಟಿವಿ, ಫ್ರಿಡ್ಜ್ ಇದ್ದರೆ ಪಡಿತರ ರದ್ದು – ಉಮೇಶ್ ಕತ್ತಿ
ಉಮೇಶ್ ಕತ್ತಿ ಹೇಳಿಕೆ ತಪ್ಪು: ಟಿವಿ, ಬೈಕ್, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತೆ ಎಂದು ಸಚಿವ ಉಮೇಶ್ ಕತ್ತಿ ಹೇಳಿರುವುದು ತಪ್ಪು. ಇಂದು ಯಾರು ನಡೆದುಕೊಂಡು ಹೋಗಲ್ಲ. ಟಿವಿ, ಫ್ರಿಡ್ಜ್ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು. ಜನರ ಆರ್ಥಿಕ ಪರಿಸ್ಥಿತಿಯನ್ನ ಪತ್ತೆ ಮಾಡಿ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲಾವಾದ್ರೆ ನಾವು ಹೋರಾಟಕ್ಕೆ ಸಿದ್ಧ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು. ಇದನ್ನೂ ಓದಿ: ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ