ಉಡುಪಿ: ಕರಾವಳಿಯಲ್ಲಿ ಬಳಕೆದಾರರ ಚಳುವಳಿ ಮೂಲಕ ಲಕ್ಷಾಂತರ ಜನರಲ್ಲಿ ಜಾಗೃತಿ ಮೂಡಿಸಿದ್ದ, ಉಡುಪಿಯ ದಾಮೋದರ ಐತಾಳ್ ಇಹಲೋಕ ತ್ಯಜಿಸಿದ್ದಾರೆ. ಅಲ್ಪಕಾಲದ ಅಸ್ವಸ್ಥದ ಬಳಿಕ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಶಿಕ್ಷಣ ತಜ್ಞ, ಮಾಜಿ ಪತ್ರಕರ್ತ, ಉಡುಪಿ ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕ ಕೆ. ದಾಮೋದರ ಐತಾಳ್ (85) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಬೇನೆಯಿಂದ ಕಡಿಯಾಳಿಯಲ್ಲಿರುವ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐತಾಳ್ ಅವರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಸರ್ಕಾರಿ ಉದ್ಯೋಗದಿಂದ ನಿವೃತ್ತರಾದ ಬಳಿಕ ಬಳಕೆದಾರರ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾಲಕಾಲಕ್ಕೆ ಜನಪ್ರತಿನಿಧಿಗಳು ಮತ್ತು ಗ್ರಾಹಕರ ನಡುವೆ ಮುಖಾಮುಖಿ ಕಾರ್ಯಕ್ರಮಗಳನ್ನು ನಡೆಸಿ ಚಳುವಳಿಗೆ ಹೊಸರೂಪವನ್ನು ಕೊಟ್ಟಿದ್ದರು.
ಕನ್ನಡ ಪಂಡಿತರಾದ ದಾಮೋದರ ಐತಾಳ್, ಅನೇಕ ವರ್ಷಗಳ ಕಾಲ ನಾಡಿನ ವಿವಿಧ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪತ್ರಿಕಾ ವರದಿಗಾರನಾಗಿ, ಅಂಕಣಕಾರರಾಗಿದ್ದರು. ಉಡುಪಿ ಪತ್ರಕರ್ತರ ಸಂಘ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಂಘಕ್ಕೆ ಹೊಸ ಶಕ್ತಿ ಕೊಟ್ಟಿದ್ದರು.
ಮಂಗಳೂರು ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಣಾ ಅಧಿಕಾರಿಯಾಗಿದ್ದ ಐತಾಳರು, ಉಡುಪಿ ಶಿಕ್ಷಕರ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಶ್ರಮಿಸಿದ್ದರು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ದಾಮೋದರ್ ಐತಾಳ್ ಅವರು ಉಡುಪಿ ಕೃಷ್ಣ ಮಠದ ಚಿನ್ನರ ಸಂತರ್ಪಣೆ ಯೋಜನೆಯ ಆರಂಭದಲ್ಲಿ ಸ್ಪೂರ್ತಿದಾಯಕರಾಗಿದ್ದರು. ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಡುಪಿಯ ಬೀಡಿನಗುಡ್ಡೆ ಸ್ಮಶಾನದಲ್ಲಿ ಐತಾಳರ ಅಂತ್ಯ ಸಂಸ್ಕಾರ ನಡೆಯಿತು.