ಶಿಲ್ಲಾಂಗ್: ಬಲವಂತವಾಗಿ ಲಸಿಕೆ ನೀಡುವುದು ಅಥವಾ ಲಸಿಕೆ ಕಡ್ಡಾಯ ಮಾಡುವುದು ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಮೇಘಾಲಯದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೇಘಾಲಯದ ನಗರಗಳಲ್ಲಿ ವ್ಯಾಪಾರ ವಹಿವಾಟು ಮಾಡುವ ಜನರಿಗೆ ಅಲ್ಲಿನ ಸ್ಥಳೀಯ ಆಡಳಿತ ಪ್ರತ್ಯೇಕ ಆದೇಶ ಹೊರಡಿಸಿ ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಮ್ಮ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಆದೇಶ ಹೊರಡಿಸಿತ್ತು.
ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಈ ರೀತಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿದರೆ ಅದು ಮನುಷ್ಯನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ
ದೇಶದಲ್ಲಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಲಸಿಕೆ ಪಡೆಯುವುದು ಅನಿವಾರ್ಯ. ಆದರೆ ಕೆಲವು ಮೂಲಭೂತ ತತ್ವಗಳನ್ನು ಗಮನಿಸಿದಾಗ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲು ಆಗುವುದಿಲ್ಲ ಹಾಗೇನಾದರು ಮಾಡಿದರು ಮನುಷ್ಯನ ಜೀವನದ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೊಮಡ್ಡರ್ ಮತ್ತು ನ್ಯಾಯಮೂರ್ತಿ ಎಚ್.ಎಸ್.ತಂಗ್ಖೀವ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆರೋಗ್ಯದ ಹಕ್ಕಿನ ಬಗ್ಗೆ ಗಮನಿಸಿದಾಗ ಲಸಿಕೆ ನೀಡುವುದು ಆರೋಗ್ಯ ರಕ್ಷಣೆಯ ಮೂಲಭೂತ ಹಕ್ಕಾಗಿದೆ. ಆದರೆ ಬಲವಂತವಾಗಿ ಲಸಿಕೆ ನೀಡುವುದು ಅಥವಾ ಕೆಲವು ನಿಯಮಗಳನ್ನು ತಂದು ಕಡ್ಡಾಯಗೊಳಿಸಿ ಲಸಿಕೆ ಪಡೆಯುವಂತೆ ಒತ್ತಡ ಹಾಕುವುದು ಮನುಷ್ಯನ ಮೂಲಭೂತ ಉದ್ದೇಶಕ್ಕೆ ದಕ್ಕೆ ತರುತ್ತದೆ ಮತ್ತು ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದು ವ್ಯಕ್ತಿಯ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಿದಂತೆ ಆಗುತ್ತದೆ. ಒಬ್ಬ ತಾನು ಲಸಿಕೆ ಹಾಕದೆ ಇರಲು ನಿರ್ಧಾರ ಮಾಡಿದರೆ ಅದು ಆತನ ನಿರ್ಧಾರ. ಆದರೆ ಇದರಿಂದ ಇತರರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಈ ವೇಳೆ ಪೀಠ ಕಳವಳ ವ್ಯಕ್ತಪಡಿಸಿದೆ.