ಬೆಂಗಳೂರು: ರಾಜ್ಯದಲ್ಲಿ ಎಲ್ಲಿಯೂ ಬಲವಂತದ ಬಂದ್ ಗೆ ಸರ್ಕಾರ ಅವಕಾಶ ಕೊಡಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕನ್ನಡ ಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ವಿಶ್ವ ಮೀನುಗಾರಿಕಾ ದಿನಾಚರಣೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾನು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇರುವಂಥವನು. ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ನಾನು ಸಿದ್ಧನಿದ್ದೇನೆ. ಬಂದ್ ಕರೆ ನೀಡುವುದು ಸೂಕ್ತ ಅಲ್ಲ. ಜನರು ಸಹ ಈ ನಡೆಯಲ್ಲ ಮೆಚ್ಚುವದಿಲ್ಲ. ಬಲವಂತದಿಂದ ಬಂದ್ ಮಾಡಲು ಎಲ್ಲಿಯೂ ನಾನು ಅವಕಾಶ ಕೊಡಲ್ಲ. ಪ್ರತಿಕೃತಿ ದಹನ ಮಾಡೋದು, ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದನ್ನ ಗಮನಿಸಿದ್ದೇನೆ. ಬಹಳ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನ ರವಾನಿಸಿದರು.
ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಆದರೆ ಪ್ರತಿಭಟನೆಗೆ ಬೇರೆ ಸ್ವರೂಪ ಕೊಡೋದು ಬೇಡ. ಎಲ್ಲ ವರ್ಗಗಳಿಗೂ ಸರ್ಕಾರ ನ್ಯಾಯ ಒದಗಿಸೋ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಯಾರಿಗೂ ಭೇದ ಭಾವ ಮಾಡುತ್ತಿಲ್ಲ. ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಲಿ ಎಂದು ಸಿಎಂ ಹೇಳಿದರು.