ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ಪ್ರಭಾಸ್

Public TV
2 Min Read
prabhash

– ಅಭಿವೃದ್ಧಿ ಪಡಿಸೋ ಜವಾಬ್ದಾರಿ ಹೊತ್ತ ಬಾಹುಬಲಿ

ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‍ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಸಹಾಯ ಮಾಡುವ ತಮ್ಮ ಮನೋಭಾವದಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್‌ಗೆ ಭರ್ಜರಿ ಉಡುಗೊರೆ ನೀಡಿದ್ದರು. ಇದೀಗ ಅರಣ್ಯವನ್ನೇ ದತ್ತು ಪಡೆದುಕೊಂಡಿದ್ದಾರೆ.

prabhas

ಸಾಮಾನ್ಯವಾಗಿ ಸಿನಿಮಾ ನಟರು ಆನೆ, ಸಿಂಹ, ಹುಲಿಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆದರೆ ಬಾಹುಬಲಿ ಖ್ಯಾತಿಯ ಪ್ರಭಾಸ್, ಇಡೀ ಅರಣ್ಯವನ್ನೇ ದತ್ತುಪಡೆದಿದ್ದಾರೆ. ಹೈದರಾಬಾದ್ ಬಳಿಯ ಬರೋಬ್ಬರಿ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದುಕೊಂಡಿದ್ದು, ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಅಲ್ಲದೇ ಮೀಸಲು ಅಭಿವೃದ್ಧಿಗಾಗಿ ಅರಣ್ಯ ಅಧಿಕಾರಿಗಳಿಗೆ 2 ಕೋಟಿ ರೂ. ಹಣವನ್ನೂ ಕೂಡ ನೀಡಿದ್ದಾರೆ. ಈ ವೇಳೆ ತೆಲಂಗಾಣದ ಅರಣ್ಯ ಸಚಿವ ಅಲೋಲಾ ಇಂದ್ರ ಕರಣ್‍ ರೆಡ್ಡಿ ಮತ್ತು ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.

ನಟ ಪ್ರಭಾಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ನಾನು ಹೈದರಾಬಾದ್ ಬಳಿಯ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ” ಎಂದು ತಿಳಿಸಿದ್ದಾರೆ.

ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಅವರ ಬೆಂಬಲಕ್ಕೆ ಮತ್ತು  ಈ ಅವಕಾಶವನ್ನು ನೀಡಿದ ತೆಲಂಗಾಣ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್‍ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ.

ಕಾಜಿಪಲ್ಲಿ ಮೀಸಲು ಅರಣ್ಯ ಅಲ್ಲಿನ ಔಷಧ ಸಂಪತ್ತಿಗಾಗಿ ಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಶೀಘ್ರದಲ್ಲಿಯೇ 1,650 ಎಕರೆ ಭೂಮಿಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣವಾಗಲಿದೆ. ಈ ಅರಣ್ಯ ಪ್ರದೇಶದಲ್ಲಿ ಅಧಿಕ ಸಸಿಗಳನ್ನು ನೆಟ್ಟು, ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ, ವನ್ಯಪ್ರಾಣಿಗಳು ಓಡಾಡುವಂತೆ ವ್ಯವಸ್ಥೆ ಕಲ್ಪಿಸುವ ಐಡಿಯಾವನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಈ ಅರಣ್ಯದಿಂದ ನಗರದ ಪರಿಸರವೂ ಉತ್ತಮವಾಗಲಿದೆ ಎಂಬುದು ಪ್ರಭಾಸ್ ನಂಬಿಕೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *