ಮುಂಬೈ: ವ್ಯಕ್ತಿಯೊಬ್ಬರು 2006ರಲ್ಲಿ ರೈಲಿನಲ್ಲಿ ಕಳೆದುಕೊಂಡಿದ್ದ ಪರ್ಸ್ ಇದೀಗ ಬರೋಬ್ಬರಿ 14 ವರ್ಷಗಳ ಬಳಿಕ ಅವರಿಗೆ ವಾಪಸ್ ದೊರೆತ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು. ಹೇಮಂತ್ ಪಡಲ್ಕರ್ ಅವರು 2006ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್- ಪನ್ವೆಲ್ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಪರ್ಸ್ ಕಳೆದುಕೊಂಡಿದ್ದರು. ಅದರಲ್ಲಿ 900 ರೂ. ಇತ್ತು ಎಂದು ಸರ್ಕಾರಿ ರೈಲ್ವೇ ಪೊಲೀಸ್ ಅಧಿಕಾರಿ(ಜಿಆರ್‌ಪಿ)ಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ಅಧಿಕಾರಿ, ಹೇಮಂತ್ ಅವರಿಗೆ ಕರೆ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಹೇರಿದ್ದ ಪರಿಣಾಮ ಹೇಮಂತ್ ಪರ್ಸ್ ತೆಗೆದುಕೊಳ್ಳಲು ಹೋಗಲು ಸಾಧ್ಯವಾಗಿರಲಿಲ್ಲ.
Advertisement
ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ನೆರೆಯ ನವೀ ಮುಂಬೈ ಟೌನ್‍ಶಿಪ್ ಪನ್ವೆಲ್ ನಿವಾಸಿಯಗಿರುವ ಹೇಮಂತ್, ವಾಶಿಯಲ್ಲಿರುವ ಜಿಆರ್‌ಪಿ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಅಧಿಕಾರಿ ಹಣದೊಂದಿಗೆ ಪರ್ಸ್ ಹಸ್ತಾಂತರಿಸಿದರು.
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಹೇಮಂತ್, ಪರ್ಸ್ ಕಳೆದುಕೊಂಡಿದ್ದ ಸಮಯದಲ್ಲಿ ಅದರಲ್ಲಿ ಒಟ್ಟು 900 ರೂ. ಇತ್ತು. ವಾಶಿ ಜಿಆರ್‌ಪಿ ಅವರು ಸದ್ಯ ಅದರಲ್ಲಿ ನನಗೆ 300 ರೂ. ಹಿಂದುರುಗಿಸಿದರು. ಸ್ಟ್ಯಾಂಪ್ ಪೇಪರ್ ಕೆಲಸಕ್ಕಾಗಿ ಅವರು 100 ರೂ. ಕಡಿತಗೊಳಿಸಿದ್ದು, ಉಳಿದ 500 ರೂ. ಹಳೆ ನೋಟು ನಿಷೇಧವಾಗಿರುವ ಹಿನ್ನೆಲೆಯಲ್ಲಿ ಹೊಸ ನೋಟಿನೊಂದಿಗೆ ನೀಡಿದ್ದಾರೆ.
ಜಿಆರ್‍ಪಿ ಅವರ ಕಚೇರಿ ತೆರಳಿದಾಗ ಅಲ್ಲಿ ಅನೇಕ ಮಂದಿ ತಮ್ಮ ಹಣ ಕಳೆದುಕೊಂಡಿದ್ದವರು ಬಂದಿದ್ದರು. ಸದ್ಯ ಕಳೆದುಕೊಂಡ ಪರ್ಸ್ ವಾಪಸ್ ಸಿಕ್ಕಿರುವುದಕ್ಕೆ ತುಂಬಾ ಸಂತಸವಾಗಿದೆ ಎಂದು ಹೇಮಂತ್ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಹೇಮಂತ್ ಪರ್ಸ್ ಕದ್ದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿದಾಗ ಆತನ ಬಳಿಯಿದ್ದ ಪರ್ಸ್ ನಲ್ಲಿ 900 ರೂ. ಇತ್ತು. ಸದ್ಯ ಹೇಮಂತ್ ಅವರಿಗೆ ನಾವು 300 ರೂ. ನೀಡಿದ್ದೇವೆ. ಉಳಿದ 500 ರೂ. ನೋಟನ್ನು ಹೊಸ ನೋಟಿಗೆ ಬದಲಾಯಿಸಿ ಕೊಡುವುದಾಗಿ ಅಧಿಕಾರಿ ತಿಳಿಸಿದ್ದಾರೆ.