ಯಾದಗಿರಿ: ಚೀನಾ ಅನೇಕ ದೇಶಗಳಿಗೆ ರಹಸ್ಯವಾಗಿ ಬಿತ್ತನೆ ಬೀಜಗಳನ್ನು ಕಳುಹಿಸುತ್ತಿದೆ, ಬಿತ್ತನೆ ಬೀಜ ಹೊರತು ಪಡಿಸಿ ರೋಗ ಹರಡುವ ವೈರಾಣುಗಳು ಅಥವಾ ಇನ್ನಿತರೆ ಮಾರಕ ಪದಾರ್ಥಗಳು ಕಳುಹಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ ಎಂದು ಯಾದಗಿರಿ ಜಂಟಿ ಕೃಷಿ ಇಲಾಖೆ ನಿರ್ದೇಶಕಿ ದೇವಿಕಾ ಆರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ದೇವಿಕಾ ಅವರು, ನಮಗೆ ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿರುವಂತೆ ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಇದೀಗ ದೇಶಕ್ಕೆ ಚೀನಾದಿಂದ ಅನುಮಾನಸ್ಪದವಾದ ಬಿತ್ತನೆ ಬೀಜಗಳು ಬರಲು ಆರಂಭವಾಗಿದೆ. ಈ ಬೀಜಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೃಷಿ ಇಲಾಖೆಯಿಂದ ನೀಡಬೇಕೆಂದು ಸೂಚನೆ ಬಂದಿದೆ ಎಂದರು. ಇದನ್ನೂ ಓದಿ:ಹೆರಿಗೆ ವೇಳೆ ಸಾವನ್ನಪ್ಪಿದ ಪತ್ನಿಯನ್ನು ನೆನೆದು ವೇದಿಕೆಯಲ್ಲೇ ಅಪರ ಜಿಲ್ಲಾಧಿಕಾರಿ ಕಣ್ಣೀರು
ಅನಾಮಧೇಯ ಬಿತ್ತನೆ ಬೀಜದ ಪೊಟ್ಟಣಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲ ಕುತಂತ್ರಗಳು ನಡೆಯುತ್ತಿದೆ. ಬಿತ್ತನೆ ಬೀಜಗಳ ಪೊಟ್ಟಣಗಳಲ್ಲಿ ಯಾವುದೇ ಹೆಸರು ಹಾಗೂ ಮಾಹಿತಿ ಇಲ್ಲದ ಬೀಜಗಳನ್ನು ರೈತರು ಖರೀದಿಸಬಾರದು. ಈ ಬೀಜಗಳು ವಿಷಕಾರಿಯಾಗಿದ್ದು, ಭೂಮಿಯ ಫಲವತ್ತತೆಯನ್ನು ನಾಶ ಮಾಡುವ ಅಂಶಗಳು ಇದರಲ್ಲಿ ಇದೆ. ಹಾಗಾಗಿ ತಮ್ಮ ಮನೆ ಬಾಗಿಲಿಗೆ ಇಂತಹ ಬೀಜಗಳು ಬಂದಲ್ಲಿ ಅದನ್ನು ಜಿಲ್ಲೆಯ ರೈತರು ಸ್ವೀಕರಿಸದೆ ವಾಪಾಸ್ ಕಳುಹಿಸಬೇಕು ಮತ್ತು ತಕ್ಷಣವೇ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.