ವಿಜಯಪುರ: ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಬಲೇಶ್ವರ ಮತ್ತು ತಿಕೋಟಾ ನೂತನ ತಾಲೂಕು ಕೇಂದ್ರಗಳಾಗಿ ಒಂದು ವರ್ಷ ಕಳೆದಿದೆ. ಆದರೂ ತಾಲೂಕು ಅಡಳಿತ ಕಚೇರಿ ಇಲ್ಲ. ಇದೀಗ ಎರಡೂ ತಾಲೂಕುಗಳ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.
ಎರಡು ನೂತನ ತಾಲೂಕಿನ ಜನರು ತಾಲೂಕು ಕಚೇರಿಗಳನ್ನು ನಿರ್ಮಿಸಲು ಅನೇಕ ಹೋರಾಟ ಮಾಡಿದ್ದರು. ಆದರೆ ಸೂಕ್ತ ಕಟ್ಟಡಗಳ ಕೊರತೆ ಇರುವುದರಿಂದ ತಾಲೂಕು ಕಚೇರಿ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದರು. ಇದೀಗ ಎರಡು ನೂತನ ತಾಲೂಕಿನ ಜನರಿಗೆ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಖುಷಿ ವಿಚಾರ ಪ್ರಕಟಿಸಿದ್ದಾರೆ. ತಾಲೂಕು ಕೇಂದ್ರಗಳಾದ ಬಬಲೇಶ್ವರ ಮತ್ತು ತಿಕೋಟಾದಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ.
Advertisement
Advertisement
ನೂತನ ತಾಲೂಕು ಕೇಂದ್ರಗಳಲ್ಲಿ ಎಲ್ಲ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ತಲಾ 10 ಕೋಟಿ ರೂ. ವೆಚ್ಚದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ಎರಡು ಕಡೆ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಿಸಲಾಗುತ್ತಿದೆ. ಬಬಲೇಶ್ವರದಲ್ಲಿ ಅಡವಿಸಂಗಾಪುರ ರಸ್ತೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಹಾಗೂ ತಿಕೋಟಾದಲ್ಲಿ ಹಳೆ ಪ್ರವಾಸಿ ಮಂದಿರದ ಜಾಗದಲ್ಲಿ ಈ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ.