ಚಿಕ್ಕಮಗಳೂರು: ಬದುಕು ಕಟ್ಟಿಕೊಡಲು ಬರುವುದಾದರೆ ಬನ್ನಿ. ಮತ್ತದೇ ಭರವಸೆ, ಆಶ್ವಾಸನೆ ನೀಡುವುದಾದರೆ ಬರಲೇಬೇಡಿ ಎಂದು ಸಚಿವ ಎಸ್.ಅಂಗಾರ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.
2019ರ ಮಳೆ ಮುಗಿದು ಈಗ ಮೂರನೇ ಮಳೆಗಾಲ ಬಂದಿದೆ. ಸರ್ಕಾರ ಹಾಗೂ ಅಧಿಕಾರಿಗಳು ಅಂದು ಕೊಟ್ಟ ಆಶ್ವಾಸನೆಗಳೇ ಇಂದಿಗೂ ಒಂದೂ ಈಡೇರಿಲ್ಲ. ಈಗ ಮತ್ತೆ ಏಕೆ ಬಂದಿದ್ದೀರಾ? ನಾವು ಸತ್ತಿದ್ದೀವಾ ಅಥವಾ ಬದುಕಿದ್ದೀವಾ ಎಂದು ನೋಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಕುಂಭದ್ರೋಣ ಮಳೆಯ ಅಬ್ಬರಕ್ಕೆ ಮಲೆಮನೆ ಗ್ರಾಮಸ್ಥರ ಬದುಕು ಬೀದಿಗೆ ಬಂದಿತ್ತು. ಸುಮಾರು ಆರು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಸುಮಾರು 40 ಎಕರೆಗೂ ಅಧಿಕ ಭೂಮಿ ಕೊಚ್ಚಿ ಹೋಗಿತ್ತು. ಆರು ಕುಟುಂಬಗಳ ಮನೆ ಸಂಪೂರ್ಣ ನೆಲಸಮವಾಗಿ ಮನೆಯ ಒಂದು ಚಮಚ ಕೂಡ ಕೈಗೆ ಸಿಗದಂತೆ ಐದಾರು ಅಡಿ ಗುಡ್ಡದ ಮಣ್ಣು ಮನೆ ಸಾಮಾಗ್ರಿಗಳ ಮೇಲೆ ಬಿದ್ದಿತ್ತು. ಜನ ಆ ಗುಡುಗು-ಸಿಡಿಲು-ಮಳೆಯಿಂದ ಬದುಕು ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಉಟ್ಟ ಬಟ್ಟೆಯಲ್ಲಿ ಓಡಿಬಂದು ಬದುಕು ಉಳಿಸಿಕೊಂಡಿದ್ದರು.
Advertisement
Advertisement
ಅಂದಿನಿಂದ ಹೊಸ ಬದುಕಿಗಾಗಿ ಹೋರಾಡುತ್ತಲೇ ಇದ್ದಾರೆ. ಅಂದು ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಐದೇ ನಿಮಿಷಕ್ಕೆ ಪ್ರವಾಸ ಮುಗಿಸಿದ್ದರು. ಆ ಐದು ನಿಮಿಷದಲ್ಲೇ ನಿಮಗೆ ಹೊಸ ಬದುಕು ಕಟ್ಟಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಮಾಧುಸ್ವಾಮಿಯೂ ಸ್ಥಳಕ್ಕೆ ಭೇಟಿ ನೀಡಿ ಹೊಸ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಅಂದು ಸಿಎಂ, ಸಚಿವರು ಹೇಳಿದ ಒಂದೇ ಒಂದು ಭರವಸೆ ಕೂಡ ಈಡೇರಿಲ್ಲ. ಮನೆ ಕೊಡ್ತೀವಿ ಅಂದ ಸರ್ಕಾರ ಇಂದಿಗೂ ಕೊಟ್ಟಿಲ್ಲ. ಒಂದು ಲಕ್ಷ ಹಣ ಕೊಟ್ಟಿದೆ. ಮನೆ ಕಟ್ಟಿಕೊಳ್ಳಲು ಜಾಗ ತೋರಿಸಿಲ್ಲ. ಬಾಡಿಗೆ ಮನೆಯಲ್ಲಿ ಇರಿ ಎಂದ ಸರ್ಕಾರ ಮೂರು ವರ್ಷಕ್ಕೆ 25 ಸಾವಿರ ಹಣ ನೀಡಿ ಕೈತೊಳೆದುಕೊಂಡಿದೆ. ಕೊಚ್ಚಿ ಹೋದ ಜಮೀನು ಇಲ್ಲ. ಮನೆ ಇಲ್ಲ. ಹಣವೂ ಇಲ್ಲ. ಬದುಕೂ ಇಲ್ಲದಂತೆ ಮಲೆಮನೆ ಗ್ರಾಮಸ್ಥರು ಅತಂತ್ರರಾಗಿದ್ದಾರೆ.
Advertisement
Advertisement
ಬದುಕಿಗಾಗಿ ಓಡಾಡದ ಕಚೇರಿ ಉಳಿದಿಲ್ಲ. ಮಾಡದ ಮನವಿಗಳಿಲ್ಲ. ಹಾಗಾಗಿ ಇಂದು ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರ ತಾಳ್ಮೆಯ ಸಹನೆಯ ಕಟ್ಟೆ ಒಡೆದಿತ್ತು. ಸಚಿವರು, ಅಧಿಕಾರಿಗಳನ್ನ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಸಚಿವರು ಆಗ ಬೇರೆ, ಈಗ ಬೇರೆ. ನಿಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡುತ್ತೇವೆ ಎಂದಿರೋದು ಸ್ಥಳೀಯರಿಗೆ ಹೊಸ ಆಸೆ ಮೂಡಿದೆ. ಸರ್ಕಾರ, ಸಚಿವರು ಏನು ಮಾಡುತ್ತಾರೋ ಕಾದುನೋಡಬೇಕು.