– ನಟರಿಂದ ಕೊರೊನಾ ವಾರಿಯರ್ಸ್‍ಗೆ ನಮನ
ಬೆಂಗಳೂರು: ಬದಲಾಗು ನೀನು ಬದಲಾಯಿಸು ನೀನು ಎಂಬ ಒಂದೇ ಹಾಡಿನಲ್ಲಿ ಸ್ಯಾಂಡಲ್‍ವುಡ್ ತಾರೆಯರೆಲ್ಲ ಒಟ್ಟಿಗೆ ಸೇರಿದ್ದು, ಕೊರೊನಾ ವಿರುದ್ಧ ಹೋರಾಡುತ್ತಿರುವ ಹೀರೋಗಳಿಗೆ ನಮಗೆ ಸಲ್ಲಿಸಿದ್ದಾರೆ.
ಸಾರ್ವಜನಿಕರಲ್ಲಿ ಕೊರೊನಾ ನಂತರದ ದಿನಗಳ ಬಗ್ಗೆ ಅರಿವು ಮೂಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಸಾಂಗ್ ಮಾಡಿಸಿದ್ದು, ಸ್ಯಾಂಡಲ್‍ವುಡ್‍ನ ಎಲ್ಲಾ ಗಾಯಕರು ಇದರಲ್ಲಿ ಧನಿಯಾಗಿದ್ದಾರೆ. ಈ ಹಾಡು ಪವನ್ ಒಡೆಯರ್ ಮತ್ತು ಇಮ್ರಾನ್ ಸರ್ಧರಿಯಾ ಅವರ ನೇತೃತ್ವದಲ್ಲಿ ಮೂಡಿ ಬಂದಿದೆ. ಇದರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಸಾಥ್ ನೀಡಿದ್ದಾರೆ.
ಸುಮಾರು 10 ನಿಮಿಷ ಇರುವ ಈ ಹಾಡಿನಲ್ಲಿ ಎಲ್ಲ ಕರ್ನಾಟಕದ ನಾಯಕ ನಟ-ನಟಿಯರು, ಮತ್ತು ಕ್ರಿಕೆಟಿಗರು ಬಂದು ಹೊಗುತ್ತಾರೆ. ಈ ಸಾಲಿನಲ್ಲಿ ಮೊದಲಿಗ ಹಾಡಿನಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ನನ್ನು ನೀವು ಹ್ಯಾಟ್ರಿಕ್ ಹೀರೋ ಎಂದು ಕರೆಯುತ್ತೀರಾ ಆದರೆ ನನ್ನ ಹೀರೋಗಳು ಕೊರೊನಾ ವಿರುದ್ಧ ಹೋರಾಡುತ್ತಿರುವ ಆಶಾಕಾರ್ಯಕರ್ತೆಯರು ಮತ್ತು ಸ್ವಯಂ ಸೇವರು ಎಂದಿದ್ದಾರೆ. ನಂತರ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ನಮ್ಮ ಮತ್ತು ಕೊರೊನಾ ನಡುವೆ ವಾಲ್ ರಚಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಮೂರನೇಯದಾಗಿ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರು ನನ್ನ ನೀವು ರಿಯಲ್ ಸ್ಟಾರ್ ಎಂದು ಕರೆಯುತ್ತೀರಾ ಆದರೆ ನನ್ನ ರಿಯಲ್ ಸ್ಟಾರ್ ರೈತರು ಎಂದಿದ್ದಾರೆ. ಇನ್ನು ದರ್ಶನ್ ಅವರು ಮಾತನಾಡಿ, ಹಲವಾರು ಚಾಲೆಂಜ್‍ಗಳನ್ನು ಮಾಡುತ್ತಿರುವ ಪೊಲೀಸರೇ ನನಗೆ ನಿಜವಾದ ಹೀರೋ ಎಂದಿದ್ದಾರೆ. ನನ್ನ ನೀವು ಪವರ್ ಸ್ಟಾರ್ ಎನ್ನುತ್ತೀರಾ ಆದರೆ ನನ್ನ ನಿಜವಾದ ಹೀರೋ ವೈದ್ಯರು ಎಂದು ಪುನೀತ್ ರಾಜ್‍ಕುಮಾರ್ ಅವರು ತಿಳಿಸಿದ್ದಾರೆ.
ಕಣ್ಣಿಗೆ ಕಾಣದೇ ಗುಂಪು ಗುಂಪಾಗಿ ಬರುವುದು ಈ ಕೊರೊನಾ ವೈರಸ್ ಬರಿ ಗ್ಯಾಂಗ್ ಸ್ಟಾರ್. ಆದರೆ ಅದರ ವಿರುದ್ಧ ಹೋರಾಟ ಮಾಡುವವನು ಮಾನ್‍ಸ್ಟಾರ್ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ. ನಂತರ ಮಾತನಾಡಿರುವ ಗೋಲ್ಡನ್ ಸ್ಟಾರ್ ಗಣೇಶ್, ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ವಿಜ್ಞಾನಿಗಳೇ ನಮ್ಮ ಹೀರೋಗಳು ಎಂದು ಹೇಳಿದ್ದಾರೆ. ಪತ್ರಕರ್ತರೇ ನಮ್ಮ ನಿಜವಾದ ಹೀರೋಗಳು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ನಂತರ ಖಳನಟ ರವಿಶಂಕರ್ ಅವರು ಕೊರೊನಾವನ್ನು ಕೌರವನಿಗೆ ಹೋಲಿಸಿದರೆ, ನಟ ರಮೇಶ್ ಅರವಿಂದ್ ಅವರು ಚಿಕ್ಕ ಸಮಸ್ಯೆ ಬಂದರೆ ಫೋನ್ ಚೇಂಜ್ ಮಾಡುವ ನಾವು ಈಗ ಮೈಂಡ್ ಸೆಟ್‍ನ ಚೇಂಜ್ ಮಾಡಬೇಕು ಎಂದಿದ್ದಾರೆ. ಜೊತೆಗೆ ಕೊರೊನಾ ಏಕಾಂಗಿ ಆಗಬೇಕು ಎಂದರೆ ನೀವು ನಿಮ್ಮ ಪ್ರೇಮಲೋಕ ಉಳಿಸಿಕೊಳ್ಳುವ ಸಿಪಾಯಿಗಳು ಆಗಬೇಕು ಎಂದು ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಿಳಿಸಿದ್ದಾರೆ. ಅನಿಲ್ ಕುಂಬ್ಳೆ ಕೂಡ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಕನ್ನಡ ನಟಿಯರಾದ ಸುಮಲತಾ, ಆಶಿಕಾ ರಂಗನಾಥ್, ಹರ್ಷಿಕಾ, ಅನುಶ್ರೀ, ಶಾನ್ವಿ, ನಟರಾದ ಅಭಿಷೇಕ್ ಅಂಬರೀಷ್, ರಾಕ್‍ಲೈನ್ ವೆಂಕಟೇಶ್, ಧ್ರುವ ಸರ್ಜಾ, ಗಾಯಕ ವಿಜಯ್ ಪ್ರಕಾಶ್, ರಾಜಕಾರಣಿಗಲಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ್, ಸಚಿವ ಸುಧಾಕರ್ ಹಾಗೂ ಪತ್ರಕರ್ತರು ಕೂಡ ಕಾಣಿಸಿಕೊಂಡಿದ್ದು, ಕೊರೊನಾ ನಂತರ ನಮ್ಮ ದಿನಗಳ ಬಗ್ಗೆ ಹೇಳಿದ್ದಾರೆ.