ಮಂಗಳೂರು: ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿ ಉಕ್ಕಿ ಹರಿದ ನೀರು ಕಂಡು ನಾಗದೇವರ ಪವಾಡ ಎಂದ ಜನ ಹೇಳಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಯನ್ನು ಸಾಕಷ್ಟು ಭಯಭಕ್ತಿಯಿಂದ ಮಾಡಲಾಗುತ್ತದೆ. ಆಗೊಮ್ಮೆ ಈಗೊಮ್ಮೆ ನಾಗಶಕ್ತಿಯ ಕಾರಣಿಕವೂ ಇಲ್ಲಿ ಬೆಳಕಿಗೆ ಬರುತ್ತಿರುತ್ತದೆ. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿಯೂ ನಾಗದೇವರು ಕಾರಣಿಕ ತೋರಿಸಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.
ನಾಗನ ಕಟ್ಟೆಯ ಬಳಿಯೇ ಇದ್ದ ಕೊಳವೆ ಬಾವಿಯೊಂದರಲ್ಲಿ ನೀರು ಬತ್ತಿ ಹೋಗಿತ್ತು. ಹೀಗಾಗಿ ನಾಗದೇವರಲ್ಲಿ ಪ್ರಾರ್ಥನೆ ಮಾಡಿ ಅಲ್ಲೇ ಪಕ್ಕದಲ್ಲಿ ಇನ್ನೊಂದು ಕೊಳವೆ ಬಾವಿ ಕೊರೆಯಲಾಯಿತು. ಆದರೆ ಆಶ್ಚರ್ಯ ಎಂಬಂತೆ 200 ಫೀಟ್ ಆಳದಲ್ಲಿಯೇ ಸುಮಾರು ಐದೂವರೆ ಇಂಚು ನೀರು ಲಭ್ಯವಾಗಿದೆ. ಇದಲ್ಲದೆ ಮೊದಲು ಬತ್ತಿ ಹೋಗಿದ್ದ ಕೊಳವೆ ಬಾವಿಯಲ್ಲಿಯೂ ಅದೇ ಸಂದರ್ಭ ನೀರು ಉಕ್ಕಿ ಹರಿದಿದೆ.ಇದನ್ನು ಓದಿ: ದೈವ ಸ್ಥಳಗಳನ್ನು ಅಪವಿತ್ರಗೊಳಿಸಿದ್ದ ಓರ್ವ ರಕ್ತಕಾರಿ ಸಾವು – ಇನ್ನಿಬ್ಬರು ದೈವಗಳ ಮುಂದೆ ಶರಣು
ಸದ್ಯ ನೀರು ಉಕ್ಕಿ ಹರಿಯುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಾಗದೇವರ ಕಾರಣಿಕದ ಬಗ್ಗೆ ಸ್ಥಳೀಯರು ಕೊಂಡಾಡುತ್ತಿದ್ದಾರೆ.