ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಕಾನನಕಾಡು ವ್ಯಾಪ್ತಿಯ ಕಾಫಿ ತೋಟದಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಮಾರುತಿ ಒಮ್ನಿಯಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಡಿಸಿಐಬಿ ತಂಡ ಮಾಲು ಸಹಿತ ವಶಕ್ಕೆ ಪಡೆದಿದೆ.
Advertisement
ಮಡಿಕೇರಿ ಸಮೀಪದ ನೀರುಕೊಲ್ಲಿ ನಿವಾಸಿ ಚಾಲಕ ವೃತ್ತಿಯ ಟಿ.ವಿ.ಲೋಹಿತ್(26) ಹಾಗೂ ಮೇಕೇರಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಟಿ.ಎಸ್.ಕೀರ್ತಿ ಬಂಧಿತ ಆರೋಪಿಗಳು. ಆರೋಪಿಗಳಿಂದ 6 ತೇಗದ ಮರದ ನಾಟಾಗಳು ಮತ್ತು ಒಮ್ನಿ ವ್ಯಾನ್ ವಶಕ್ಕೆ ಪಡೆದಿದ್ದು, ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement
Advertisement
ಶರ್ಟ್, ಪ್ಯಾಂಟ್ ವ್ಯಾಪಾರದ ಸೋಗು
ಒಮ್ನಿ ವ್ಯಾನಿನಲ್ಲಿ ಸುತ್ತಲೂ ಟೀ ಶರ್ಟ್, ಹಾಫ್ ಪ್ಯಾಂಟ್ ಗಳನ್ನು ನೇತು ಹಾಕಿ ವ್ಯಾಪಾರ ಮಾಡುವ ಸೋಗಿನಲ್ಲಿ ವಿವಿಧ ಅಳತೆಯ 6 ತೇಗದ ಮರದ ನಾಟಾಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದ ಸಂದರ್ಭ ಸೋಮವಾರಪೇಟೆ ತಾಲೂಕು ವಾಲ್ಲೂರು ಪೊಲೀಸರು ತ್ಯಾಗತ್ತೂರು ಜಂಕ್ಷನ್ ಬಳಿ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ಡಿಸಿಐಬಿ ವಿಭಾಗದ ಪಿ.ಐ. ಎನ್.ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ಬಿ.ಎಲ್.ಯೊಗೇಶ್ ಕುಮಾರ್, ಎಂ.ಎನ್.ನಿರಂಜನ್, ಕೆ.ಆರ್.ವಸಂತ, ಕೆ.ಎಸ್.ಅನಿಲ್ ಕುಮಾರ್, ವಿ.ಜಿ.ವೆಂಕಟೇಶ್, ಬಿ.ಜಿ.ಶರತ್ ರೈ, ಸುರೇಶ್ ಹಾಗೂ ಶಶಿಕುಮಾರ್ ಪಾಲ್ಗೊಂಡಿದ್ದರು.