ಗದಗ: ನವಜಾತ ಶಿಶುವೊಂದನ್ನು ಬಟ್ಟೆನಲ್ಲಿ ಸುತ್ತಿ ಬಸ್ ನಿಲ್ದಾಣ ಬಳಿ ಇಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗಜೇಂದ್ರಗಡ ಬಸ್ ನಿಲ್ದಾಣ ಗೇಟ್ ಒಳಭಾಗದ ಬಳಿ ಈ ನವಜಾತ ಶಿಶು ಪತ್ತೆಯಾಗಿದೆ. ಇದು ಗಂಡು ಶಿಶುವಾಗಿದ್ದು, ಯಾರೋ ಪಾಪಿಗಳು ಬಟ್ಟೆಯಲ್ಲಿ ಸುತ್ತಿಟ್ಟು ನಾಪತ್ತೆಯಾಗಿದ್ದಾರೆ. ನಂತರ ಹಸಿವಿನಿಂದ ನರಳಾಡುತ್ತಿದ್ದ ಹಸುಗೂಸಿನ ಧ್ವನಿ ಕೇಳಿ ಸಾರ್ವಜನಿಕರು ಗಮನಿಸಿ ಕೂಡಲೇ ಗಜೇಂದ್ರಗಡ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶಿಶುವನ್ನು ರಕ್ಷಣೆ ಮಾಡಿ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದು, ಗಜೇಂದ್ರಗಡ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.