ನವದೆಹಲಿ: ಪೂರ್ವ ಲಡಾಖ್ ಗಡಿ ವಿಚಾರದಲ್ಲಿ ಭುಗಿಲೆದ್ದಿರುವ ವಿವಾದ ಸಂಬಂಧ ಭಾರತ-ಚೀನಾ ಮಿಲಿಟರಿ ಕಮಾಂಡರ್‍ಗಳ ನಡುವೆ ನೈಜ ನಿಯಂತ್ರಣ ರೇಖೆ ಆಚೆ ಚೀನಾದ ಮೋಲ್ಡೋದಲ್ಲಿ ನಡೆದ ಸಭೆ ವಿಫಲಗೊಂಡಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ಬೆಳಗ್ಗೆ 11.30ಕ್ಕೆ ಶುರುವಾಯ್ತು. ಭಾರತದ ಪರ 14 ಕಾಪ್ರ್ಸ್ ಪಡೆಗಳ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಪ್ರತಿನಿಧಿಸಿದ್ದರು. ಪೂರ್ವ ಲಡಾಖ್‍ನ ಪಾಂಗಾಂಗ್ ಸರೋವರ, ಗಾಲ್ವಾನ್ ಕಣಿವೆ ಮತ್ತು ಡೆಮ್‍ಚಾಕ್‍ನಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನ ಸಂಬಂಧ ಚರ್ಚೆಗಳು ನಡೆದವು.
ಚೀನಾಗೆ ಸೇನೆ ವಾಪಸ್ ಪಡೆಯುವಂತೆ ಆಗ್ರಹಿಸಿತು. ಆದರೆ ಇದಕ್ಕೆ ಒಪ್ಪದ ಚೀನಾ ತನ್ನ ನಿಲುವಿನಿಂದ ಹಿಂದೆ ಸರಿಯದೇ, ಬೇಕಿದ್ದರೆ ಯಥಾಸ್ಥಿತಿ ಕಾಯ್ದುಕೊಳ್ಳೋದಾಗಿ ತಿಳಿಸಿತು. ಹೀಗಾಗಿ ಮಾತುಕತೆ ಅಪೂರ್ಣವಾಯಿತು. ಈ ನಡುವೆ ಚೀನಾದ ಪ್ರಮುಖ ಪತ್ರಿಕೆಯೊಂದು ಅಮೆರಿಕ ಜೊತೆ ಭಾರತ ಉತ್ತಮ ಸಂಬಂಧ ಹೊಂದಿರೋದಕ್ಕೆ ಕಿಡಿಕಾರಿದೆ.
ಚೀನಾ ಎಂದಿಗೂ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಭಾರತವನ್ನು ಶತ್ರುವಿವಂತೆ ನೋಡಲು ಕಾರಣಗಳಿಲ್ಲ. ಆದರೆ ತಮ್ಮ ದೇಶದ ಭೂಭಾಗದ ಒಂದಿಂಚೂ ಕೂಡ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕವನ್ನು ನಂಬಿ ಭಾರತ ಮೋಸ ಹೋಗಬಾರದು. ಎಚ್ಚರಿಕೆಯಿಂದ ಇರಬೇಕು ಅಂತ ಬಿಟ್ಟಿ ಸಲಹೆ ನೀಡಿದೆ.
ಭಾರತದ `ಬೆರಳ್’ಗೆ ಚೀನಾ ಪಟ್ಟು!
ಲಡಾಖ್ ಬಳಿಯ ಪಾಂಗಾಂಗ್ ಸರೋವರದ ಬಳಿ ಗಡಿ ವಿವಾದವಿದ್ದು, ಗಡಿ ಭಾಗ ಅಧಿಕೃತವಾಗಿ ಹಂಚಿಕೆಯಾಗಿಲ್ಲ. ಪಾಂಗಾಂಗ್ ಸರೋವರದ ಉತ್ತರ ದಿಕ್ಕಿನಲ್ಲಿ ಬಂಜರು ಪರ್ವತ ಪ್ರದೇಶಗಳಿವೆ. ಈ ಪರ್ವತ ಪ್ರದೇಶಗಳನ್ನು ಎರಡು ಸೇನೆಗಳು ಫಿಂಗರ್ಸ್ ಎಂದು ಕರೆಯುತ್ತವೆ.
ಈ ಬೆರಳುಗಳ ಲೆಕ್ಕದ ವಿಚಾರದಲ್ಲಿ 2 ದೇಶಗಳ ನಡುವೆ ವಿವಾದ ಏರ್ಪಟ್ಟಿದೆ. ಫಿಂಗರ್ 8ರ ಮೇಲೆ ನೈಜ ನಿಯಂತ್ರಣ ರೇಖೆ ಹಾದು ಹೋಗುತ್ತದೆ ಎಂಬುದು ಭಾರತದ ವಾದವಾಗಿದೆ. ವಾಸ್ತವದಲ್ಲಿ, ಭೌತಿಕವಾಗಿ ಫಿಂಗರ್ 4ರವರೆಗೂ ಭಾರತ ಹಿಡಿತ ಇದೆ. ಫಿಂಗರ್ 8ರ ಬುಡದಲ್ಲಿ ಚೀನಾ ಸೇನಾ ಪೋಸ್ಟ್ ಹೊಂದಿದೆ. ಪ್ರಸ್ತುತ ಫಿಂಗರ್ 2ರ ವರೆಗೂ ಚೀನಾ ಸೇನೆ ನುಗ್ಗಿ ಬಂದಿದೆ.
ಫಿಂಗರ್ 4 ಪರ್ವತದ ಮೇಲೆ ನಿಂತರೇ ಪಾಂಗಾಂಗ್‍ನಲ್ಲಿ ಭಾರತದ ಸೇನೆ ಚಟುವಟಿಕೆಯೆಲ್ಲಾ ಸ್ಪಷ್ಟವಾಗಿ ಕಾಣುತ್ತವೆ. ರಕ್ಷಣಾ ದೃಷ್ಟಿಯಿಂದ ಪ್ರಾಮುಖ್ಯತೆ ಹೊಂದಿರುವ ಕಾರಣ ಭಾರತ ತನ್ನ ಫಿಂಗರ್ 4ಗಾಗಿ ಪಟ್ಟು ಹಿಡಿದಿದೆ. ಆದರೆ ಚೀನಾ ಹಿಂದೆ ಸರಿಯಲು ಒಪ್ಪುತ್ತಿಲ್ಲ.