ಬಂಟ್ವಾಳ-ಚಾರ್ಮಾಡಿ ಹೆದ್ದಾರಿ ಕಾಮಗಾರಿ -“ಭೂಮಿ ನೀಡಿದವರಿಗೆ ಭೂಮಿಯೂ ಇಲ್ಲ, ಪರಿಹಾರನೂ ಇಲ್ಲ”

Public TV
1 Min Read
CHARMADI 1

– ಹೆದ್ದಾರಿಗೆ ಬೇಲಿ ಹಾಕಲು ಜನರ ನಿರ್ಧಾರ

ಮಂಗಳೂರು: ಬಿ.ಸಿ.ರೋಡು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಕೊಟ್ಟ ಜನರಿಗೆ ಪರಿಹಾರ ಮಾತ್ರ ಇನ್ನು ಮರಿಚಿಕೆಯಾಗೇ ಉಳಿದಿದೆ. ಹೀಗಾಗಿ ಆಕ್ರೋಶಗೊಂಡಿರುವ ಸಂತ್ರಸ್ತರು ಹೆದ್ದಾರಿಗೆ ಬೇಲಿ ಹಾಕಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

CHARMADI 2 medium

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿರೋಡಿನಿಂದ ಚಾರ್ಮಾಡಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73 ರಲ್ಲಿ ಬಿ.ಸಿರೋಡ್‍ನಿಂದ ಪುಂಜಾಲಕಟ್ಟೆಯವರೆಗೆ ರಸ್ತೆ ಅಗಲೀಕರಣ ಮಾಡಲಾಗಿದೆ. ಸುಮಾರು 19 ಕಿಲೋ ಮೀಟರ್‍ ನ ರಸ್ತೆ ಅಗಲೀಕರಣ ಕಾಮಗಾರಿಗೆ ಸರ್ಕಾರ 100 ಎಕರೆಗಿಂತ ಹೆಚ್ಚು ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಭೂಸ್ವಾಧಿನವಾಗಿ ಮೂರು ವರ್ಷ ಕಳೆದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮಾತ್ರ ಇನ್ನು ಸಿಕ್ಕಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಕೊಟ್ಟ ಜನ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜುಲೈ 10ರಂದು ತುಳುನಾಡ್ದ ಕಟ್ಟು ಕಟ್ಟಲೆ ವಿಚಾರಗೋಷ್ಠಿ

CHARMADI 3 medium

ಈಗಾಗಲೇ ರಸ್ತೆ ಕಾಮಗಾರಿ ಪೂರ್ಣವಾಗುತ್ತ ಬಂದಿದೆ. ಇನ್ನೂ ಪರಿಹಾರ ನೀಡದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಧಿಕಾರ ಈಗಾಗಲೇ ಕೇವಲ ಮನೆ ಕಳೆದುಕೊಂಡವರಿಗೆ ಮಾತ್ರ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಉಳಿದಂತೆ ಕೃಷಿ ಭೂಮಿ, ಇತರ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ. ಕೇವಲ ಪರಿಹಾರದ ಪತ್ರ ನೀಡಿ ಸಮಾಧಾನ ಪಡಿಸುವ ಕೆಲಸ ಮಾತ್ರ ಮಾಡಿಕೊಂಡು ಬಂದಿದೆ. ಇಲ್ಲಿ ಸುಮಾರು 200ಕ್ಕೂ ಹೆಚ್ಚು ಜನರ ಭೂಸ್ವಾಧೀನ ಆಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡದಿದ್ದರೆ ರಸ್ತೆಗೆ ಬೇಲಿ ಹಾಕುವ ತೀರ್ಮಾನವನ್ನು ಸಂತ್ರಸ್ತರು ಮಾಡಿದ್ದಾರೆ.

charmadi 4 medium

ಪರಿಹಾರ ನೀಡಬೇಕಾದ ಅಧಿಕಾರಿಗಳು ಕೋವಿಡ್‍ನಿಂದ ಆಸ್ಪತ್ರೆ ಸೇರಿರುವ ಕಾರಣ ಪರಿಹಾರ ವಿಳಂಬವಾಗಿದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಾದ. ಇಷ್ಟು ವಿಳಂಬ ಆಗಿರುವುದು ಮಾತ್ರ ಯಾರ ನಿರಾಸಕ್ತಿಯಿಂದ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಇನ್ನಾದರೂ ಶೀಘ್ರವಾಗಿ ಪರಿಹಾರದ ಮೊತ್ತ ಜಮೆ ಆಗಲಿ ಎಂಬುದೇ ನಮ್ಮ ಆಶಯ.

Share This Article
Leave a Comment

Leave a Reply

Your email address will not be published. Required fields are marked *