ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

Public TV
2 Min Read
FotoJet 9 7

– ಆರೋಪ, ಪ್ರತ್ಯಾರೋಪದಲ್ಲಿ ಟಿಎಂಸಿ, ಬಿಜೆಪಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ವೇಳೆ ನೆತ್ತರು ಚೆಲ್ಲಿದೆ. ಬಂಗಾಳದ ಕೂಚ್‍ಬೆಹಾರದ ಮತಗಟ್ಟೆ ಮುಂಭಾಗ ಗೋಲಿಬಾರ್ ನಡೆದಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

FotoJet 10 6

ನಡೆದಿದ್ದೇನು?: ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸಿಟಾಲ್ಕು ಚಿಯಾಟ್‍ನ ಮತದಾನದ ಕೇಂದ್ರದಲ್ಲಿ ಅಪರಿಚಿತರು ಕ್ಯೂಆರ್‍ಟಿ (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಕ್ಯೂಆರ್‍ಟಿ ವಾಹನ ಧ್ವಂಸಗೊಳಿಸಲು ಮುಂದಾಗಿ, ಗನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಅಪರಿಚಿತರ ಚಲನವಲನ ಗಮನಿಸಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿ ವೇಳೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನ ಹಮಿದುಲ್ ಹಕ್, ಮನಿರೂಲ್ ಹಕಂ ಸಮಿಯುಲ್ ಹಕ್ ಮತ್ತು ಅಜ್ಮದ್ ಹುಸೈನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಗುರುತು ಪತ್ತೆಯಾಗಿಲ್ಲ.

ಎಡಿಜಿ ಸ್ಪಷ್ಟನೆ: ಗೋಲಿಬಾರ್ ಸಂಬಂಧ ಒಂದು ಗಂಟೆಯಲ್ಲಿ ಪ್ರಾಥಮಿಕ ವರದಿ ನೀಡುವಂತೆ ಚುನಾವಣಾ ಆಯೋಗ ಕೂಚಿಬೆಹಾರನ ಡಿಇಓಗೆ ಸೂಚನೆ ನೀಡಿದೆ. ಪಶ್ಚಿಮ ಬಂಗಾಳದ ಎಡಿಜಿ ಜಗಮೋಹನ್ ನಾಲ್ವರು ಮೃತಪಟ್ಟಿರೋದನ್ನು ಖಚಿತ ಪಡಿಸಿದ್ದಾರೆ. ಅಪರಿಚಿತರು ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದಾಗ ಸಿಐಎಸ್‍ಎಫ್ ನ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

FotoJet 12 5

ಗುಂಡು ಹಾರಿಸ್ತೀರಾ?: ಈ ಕುರಿತು ಟಿಎಂಸಿ ಸಂಸದ ಡೆರೆಕೆ ಓ ಬ್ರಾಯನ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನೀವು ನಮ್ಮನ್ನ ಸೋಲಿಸಲು ಆಗದ್ದಕ್ಕೆ, ಗುಂಡು ಹಾರಿಸ್ತೀರಾ? ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಫೈರಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕೆಲ ದಿನಗಳ ಹಿಂದೆ ಇಲ್ಲಿಯ ಡಿಜಿ, ಎಡಿಜಿ ಮತ್ತು ಗೋಲಿಬಾರ್ ನಡೆದ ಸ್ಥಳದ ಎಸ್‍ಪಿಯನ್ನ ಸಹ ಬದಲಿಸಿತ್ತು ಎಂದು ಆರೋಪಿಸಿದ್ದಾರೆ.

ಮತ್ತೋರ್ವ ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಸಿಎಪಿಎಫ್ ನವರು ನಾಲ್ವರನ್ನ ಕೊಲೆ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗವೇ ಕಾರಣ. ಮೋದಿ-ಅಮಿತ್ ಶಾ ಫೋರ್ಸ್ ನಿಯಂತ್ರಣ ಮಾಡಲು ಆಗದವರು. ಈ ಗೊಂಬೆಗಳನ್ನ ಸದನದಲ್ಲಿ ತೋರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಪ್ರತಿಕ್ರಿಯೆ: ಸಿಲಿಗುಡಿ ಬಿಜೆಪಿ ರ್ಯಾಲಿಯಲ್ಲಿ ಕೂಚ್‍ಬೆಹರಾ ಗೋಲಿಬಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ದೀದಿ ಮತ್ತು ಅವರ ಗೂಂಡಾಗಳು ಬಿಜೆಪಿಯ ಗೆಲುವನ್ನು ಕಂಡು ಚಡಪಡಿಸುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಹಿಂಸೆಯ ಮೊರೆ ಹೋಗಿದ್ದಾರೆ. ಆದ್ರೆ ಈ ಹಿಂಸೆ ಬಂಗಾಲದಿಂದ ದೀದಿಯನ್ನ ಹೊರ ಕಳುಹಿಸೋದರಿಂದ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *