– ಎರಡು ದಿನದ ಹಿಂದೆಯೇ ಗೆಳೆಯ ನಾಪತ್ತೆ
ನವದೆಹಲಿ: ಫ್ಲ್ಯಾಟ್‍ನಲ್ಲಿ ಹಾಸಿಗೆ ಕೆಳಗೆ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.
ಮೃತ ಯುವತಿಯನ್ನು ದಿಶು ಕುಮಾರಿ (26) ಎಂದು ಗುರುತಿಸಲಾಗಿದೆ. ಯುವತಿಯ ಕೊಳೆತ ಶವ ಶುಕ್ರವಾರ ಪತ್ತೆಯಾಗಿದೆ. ಮೃತ ದಿಶು ಕುಮಾರಿ ಜಾರ್ಖಂಡ್ ಮೂಲದವಳಾಗಿದ್ದು, ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಎರಡು ದಿನಗಳ ಹಿಂದೆಯೇ ಈ ಕುಮಾರಿ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಫ್ಲ್ಯಾಟ್ ಅನ್ನು ಕುಮಾರಿಯ ಗೆಳೆಯ ಬಾಡಿಗೆಗೆ ಪಡೆದಿದ್ದನು. ಆತನ ಜೊತೆಯೇ ಈಕೆಯೂ ವಾಸಿಸುತ್ತಿದ್ದಳು. ಆದರೆ ಈಗ ಗೆಳೆಯ ಪರಾರಿಯಾಗಿದ್ದಾನೆ. ನೆರೆಹೊರೆಯವರು ಪೊಲೀಸರಿಗೆ ಫೋನ್ ಫ್ಲ್ಯಾಟ್‍ವೊಂದರಲ್ಲಿ ದುರ್ವಾಸನೆ ಬರುತ್ತಿದೆ. ಹೀಗಾಗಿ ಇರಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫ್ಲ್ಯಾಟ್ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವು ಹಾಸಿಗೆಯ ಕೆಳಗೆ ಪತ್ತೆಯಾಗಿದೆ. ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಮೀನಾ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಯುವತಿಯ ಗೆಳೆಯ ಎರಡು ಮೂರು ತಿಂಗಳ ಹಿಂದೆ ಫ್ಲ್ಯಾಟ್ ಬಾಡಿಗೆ ಪಡೆದುಕೊಂಡಿದ್ದನು ಎಂದು ತಿಳಿದುಬಂದಿದೆ. ಆದರೆ ಕಳೆದ ಎರಡು ದಿನಗಳಿಂದ ಕುಮಾರಿಯ ಗೆಳೆಯ ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಅನೇಕ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.