– ನಸುಕಿನ ಜಾವವೇ ಆತ್ಮಹತ್ಯೆ ಮಾಡ್ಕೊಂಡ್ರಾ ಚಿತು?
ಚೆನ್ನೈ: ತಮಿಳು ಧಾರಾವಾಹಿ ನಟಿ ವಿಜೆ ಚಿತ್ರಾ ಅವರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೀತಿಯಲ್ಲಿ ಪತ್ತೆಯಾಗಿದ್ದು, ಇದೀಗ ಅವರ ಭಾವಿ ಪತಿ ಘಟನೆ ಬಗ್ಗೆ ವಿವರಿಸಿದ್ದಾರೆ.
ಹೌದು. ಕೆಲವು ತಿಂಗಳ ಹಿಂದೆ ನಟಿ ಉದ್ಯಮಿ ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ನಟಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಕೂಡ ಫೋಟೋ ಹಾಕಿಕೊಂಡಿದ್ದರು. ನಿಶ್ಚಿತಾರ್ಥ ಬಳಿಕದಿಂದ ಜೋಡಿ ಚೆನ್ನೈನಲ್ಲಿರುವ ಖಾಸಗಿ ಪಂಚತಾರಾ ಹೋಟೆಲೊಂದರಲ್ಲಿ ಉಳಿದುಕೊಂಡಿತ್ತು. ಇಂದು ನಸುಕಿನ ಜಾವ 2.30 ಸುಮಾರಿಗೆ ಶೂಟಿಂಗ್ ಮುಗಿಸಿಕೊಂಡು ಚಿತ್ರಾ ರೂಮಿಗೆ ಬಂದಿದ್ದಾರೆ.
ರೂಮಿಗೆ ಬಂದ ಚಿತ್ರಾ ತನ್ನ ಭಾವಿ ಪತಿ ಬಳಿ, ಫ್ರೆಶ್ ಆಗಿ ಬರುವುದಾಗಿ ಹೇಳಿ ಪತಿ ಬಳಿಯಿಂದ ತೆರಳಿದ್ದಾರೆ. ಆದರೆ ಸುಮಾರು ಕೆಲ ಹೊತ್ತಾದರೂ ನಟಿ ಬರದೇ ಇದ್ದಾಗ ಹೇಮಂತ್ ರೂಮ್ ಬಾಗಿಲು ಬಡಿದಿದ್ದಾರೆ. ಈ ವೇಳೆ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿ ನಕಲಿ ಕೀ ಮೂಲಕ ರೂಮ್ ಬಾಗಿಲು ತೆರೆದಿದ್ದಾರೆ. ಈ ವೇಳೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಚಿತು ಅಂತಾನೇ ಚಿರಪರಿಚಿತರಾಗಿದ್ದ ಚಿತ್ರಾ ಅವರು ಜನಪ್ರಿಯ ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಚಿತ್ರಾ ಅವರು ಕಾರ್ಯಕ್ರಮ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ತನ್ನ ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದ ಚಿತ್ರಾ, ಆಗಾಗ ತನ್ನ ಫೋಟೋ ಹಾಗೂ ಕೆಲವೊಂದು ಪೋಸ್ಟ್ ಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ಕೆಲವೊಂದು ಕಾಮಿಡಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.
ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ಇಡೀ ಚಿತ್ರರಂಗಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ನೋವುಂಟು ಮಾಡಿದ್ದು, ಖಿನ್ನತೆಯೇ ಆಕೆಯ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.