ಉಡುಪಿ: ಕೊರೊನಾ ಮಹಾಮಾರಿ ಎರಡನೇ ಅಲೆಯು ನಮ್ಮನ್ನು ಇನ್ನಿಲ್ಲದಂತೆ ಬೆಚ್ಚಿ ಬೀಳಿಸಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಮರು ಈದುಲ್ ಫಿತರ್ ಹಬ್ಬವನ್ನು ಸರಳವಾಗಿ ಆಚರಿಸಬೇಕು. ತಮ್ಮ ನೆರೆಹೊರೆಯ ಅರ್ಹ ಬಡವರಿಗೆ ಜಾತಿ ಮತ ನೋಡದೆ ಸಹಾಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಸಲಹೆ ನೀಡಿದ್ದಾರೆ.
ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಈ ಜಗತ್ತು ಕೊರೊನಾ ಎಂಬ ಮಹಾಮಾರಿಯ ಬಾಹುವಿನಲ್ಲಿ ನಲುಗಿದ್ದು, ನಮ್ಮ ದೇಶವೂ ಅದಕ್ಕೆ ಹೊರತಾಗಿಲ್ಲ. ಕಳೆದ ವರ್ಷದ ಈ ಅವಧಿಯಲ್ಲಿ ಈ ಕಾಯಿಲೆಯಿಂದ ಅಂತಹ ಸಾವು ನೋವಿನ ಅನುಭವವಾಗದಿದ್ದರೂ ಅದರ ದುಷ್ಪರಿಣಾಮವು ಹಲವು ಆಯಾಮಗಳಲ್ಲಿ ನಮ್ಮನ್ನು ಕಾಡಿತ್ತು. ನಮ್ಮ ಆರೋಗ್ಯ ಸೇನಾನಿಗಳಿಂದಾದಿಯಾಗಿ ಅದೆಷ್ಟೋ ದೇಶ ಬಾಂಧವರು ನಮ್ಮನ್ನು ಅಗಲಿರುವುದು ಮತ್ತು ಈ ಕಾಲಾವಧಿಯ ಪರಿಣಾಮಗಳು ನಮ್ಮೆಲ್ಲರನ್ನು ದುಃಖಕ್ಕಿಡು ಮಾಡಿದೆ ಎಂದಿದ್ದಾರೆ.
ಹೇಳಿಕೆಯಲ್ಲಿ ಏನಿದೆ?
ಬಂಧು ಬಾಂಧವರನ್ನು ಕಳೆದುಕೊಂಡ ನೋವು ಮತ್ತು ಅನುಭವಿಸಿದ ಯಾತನೆಯು ಮನ ಕಲುಕಿಸಿದೆ. ಸರಕಾರ ಕೊರೊನಾ ಮಹಾಮಾರಿಯ ಸರಪಳಿಯನ್ನು ಮುರಿಯುವ ಉದ್ದೇಶದಿಂದ ಹೇರಿದ ಕಫ್ರ್ಯೂ ಮತ್ತು ಲಾಕ್ಡೌನ್ಗಳ ಬಗ್ಗೆ ಜನ ಮಾನಸದಲ್ಲಿ ಅತೃಪ್ತಿ ಇದ್ದರೂ ಸಮುದಾಯ ಈ ಸಾಂಕ್ರಾಮಿಕ ರೋಗಕ್ಕೆ ತಡೆ ನೀಡಲು ಆಡಳಿತದೊಂದಿಗೆ ಸಹಕರಿಸುತ್ತಿರುವುದು ಸಂತೋಷದಾಯಕ. ಸಮುದಾಯವು ವಿಚಾರಪೂರ್ಣ ಜವಾಬ್ದಾರಿಯುತ ಸೇವಾ ಮನೋಭಾವದ ಮಾನವೀಯ ಸಂಘಟನೆಗಳು ನಮ್ಮ ಸಹೋದರ ಸಹೋದರಿಯರ ನೆರವಿಗಾಗಿ ಹಗಲು ರಾತ್ರಿ ಕೈಯೊಡ್ಡಿರುವುದು ಸರ್ವಶಕ್ತನಾದ ಜಗದೊಡೆಯನ ಕೃಪೆಗೆ ಪಾತ್ರವಾಗಿದೆ.
ಪವಿತ್ರ ರಮದಾನಿನ ಉಪವಾಸ ವೃತಾಚರಣೆಯಲ್ಲೂ ನಮ್ಮ ಸಂಘಟನೆಗಳ ಸದಸ್ಯರು, ಮಹಿಳಾ ಘಟಕಗಳೂ ಸೇರಿ ಕಟಿಬದ್ಧರಾಗಿ ಮೃತದೇಹಗಳ ವಿಲೇವಾರಿ ಮಾಡಿದ ಮತ್ತು ಮಾಡುತ್ತಿರುವ ಸೇವೆಗಳು ಪ್ರಪಂಚದಾದ್ಯಂತ ಪ್ರಶಂಸನೀಯವಾಗಿದೆ. ಪವಿತ್ರ ರಮದಾನ್ ಕಳೆದ ವರ್ಷದಂತೆ ಈ ವರ್ಷವೂ ಕಳೆದಿದ್ದು, ವಿದಾಯ ಹಂತದಲ್ಲಿದೆ. ಒಬ್ಬರನ್ನೊಬ್ಬರು ಹರಸಿ ಹಾರೈಸುವ ಸಂತೋಷವು ಕಮರಿದೆ. ದೂರದಿಂದಲೇ ದೂರವಾಣಿ ಸಂದೇಶದ ಮೂಲಕ ನಮ್ಮ ಹಾರೈಕೆಗಳನ್ನು ವಿನಿಮಯ ಮಾಡಿಕೊಂಡು ಸೃಷ್ಟಿಕರ್ತನಿಗೆ ಕೃತಾರ್ಥರಾಗೋಣ ಮತ್ತು ನಮ್ಮನ್ನಗಲಿದ ದೇಶಬಾಂಧವರ ಸದ್ಗತಿಗಾಗಿ ಹಾಗೂ ಈ ಸಂಕಟದಲ್ಲಿ ನರಳುತ್ತಿರುವ ಜೀವಗಳ ಚೇತರಿಕೆಗಾಗಿ ಪ್ರಾರ್ಥಿಸೋಣ.
ಹಬ್ಬದ ಸಂದರ್ಭದಲ್ಲಿ ವಾರಿಯರ್ಸ್ ಮತ್ತು ಸೇವಾ ಸಂಘಟನೆ ಗಳ ಸದಸ್ಯರುಗಳನ್ನು ಹೃದಯಾಂತರಾಳದಿಂದ ನೆನಪಿಸಿಕೊಳ್ಳಬೇಕು. ಈ ಮಹಾಮಾರಿಗೆ ಸಂಬಂಧಪಟ್ಟ ಸೇವಾ ಕಾರ್ಯಗಳಿಗೆ, ಆಡಳಿತಾತ್ಮಕ ನಿಲುವುಗಳಿಗೆ ಸಂಬಂಧಪಟ್ಟಂತೆ ಹರಿದಾಡುವ ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಪರಾಮರ್ಶಿಸದೇ ಅವಿವೇಚನೆಯಿಂದ ಫಾರ್ವರ್ಡ್ ಮಾಡುವ ಬದಲಾಗಿ ಪರಾಮರ್ಷಿಸಿ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಒಂದೇ ತಾಯಿಯ ಮಕ್ಕಳಂತೆ ವರ್ತಿಸಬೇಕು ಎಂದು ಹೇಳಿದ್ದಾರೆ.