ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಅವರು ಕಂಬನಿ ಮಿಡಿದಿದ್ದಾರೆ.
ಇಂದು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರು, ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿರು ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ಬಂದಿದ್ದ ಜಗ್ಗೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಚಿರು-ಮೇಘನಾ ಮದುವೆಗೆ ನಾನೇ ಅವರ ಪೋಷಕರನ್ನು ಒಪ್ಪಿಸಿದ್ದೆ ಎಂದು ಹೇಳಿದ್ದಾರೆ.
ಈ ಸಾವು ಅನಿರೀಕ್ಷಿತ, ನನ್ನ ಡ್ರೈವರ್ ಕಡೆಯಿಂದ ಸಾವಿನ ವಿಚಾರ ಗೊತ್ತಾಯ್ತು. ಬಹಳ ನೋವಾಯ್ತು. ಚಿರು ಮೇಘನಾಳನ್ನು ತುಂಬಾ ಇಷ್ಟ ಪಡುತ್ತಿದ್ದ. ಒಂದು ದಿನ ಫೋನ್ ಮಾಡಿ ನಾನು ಮೇಘನಾಳನ್ನು ಬಹಳ ಇಷ್ಟ ಪಡುತ್ತಿದ್ದೇನೆ. ಆದರೆ ಅವರ ಪೋಷಕರು ಒಪ್ಪುತ್ತಿಲ್ಲ ಎಂದು ಹೇಳಿದ್ದ. ಆಗ ನಾನೇ ಸುಂದರ್ ಬಳಿ ಮಾತನಾಡಿ ಒಪ್ಪಿಸಿದ್ದೆ. ಆಗ ನನಗೆ ಹೀಗಾಗುತ್ತೆ ಎಂದು ನೆನಸಿರಲಿಲ್ಲ ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅರ್ಜುನ್ ಸರ್ಜಾ ಅವರು ನನಗೆ ಕರೆ ಮಾಡಿದ್ದರು. ಆಗ ನಾವು ಇವರ ಬಗ್ಗೆ ಮಾತನಾಡಿದ್ದೇವು. ಅರ್ಜುನ್ ನಾವು ದಡ ಸೇರಿದ್ದೇವೆ. ಈಗ ಧ್ರುವ ಮತ್ತು ಚಿರು ಕೂಡ ಚೆನ್ನಾಗಿದ್ದಾರೆ ಎಂದು ಹೇಳಿದ್ದರು. ನೋಡಿದರೆ ಈಗ ಈ ರೀತಿಯ ವಿಚಾರ ಕೇಳಿ ಬಹಳ ಬೇಸರವಾಯ್ತು. ಈಗ ನನಗೆ ಚಿರು ಆತ್ಮಕ್ಕೆ ಶಾಂತಿಕೋರುವುದಕ್ಕೂ ಹಿಂಜರಿಕೆ ಆಗುತ್ತಿದೆ ಎಂದು ಜಗ್ಗೇಶ್ ದು:ಖ ವ್ಯಕ್ತಪಡಿಸಿದರು.
ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 2:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.