– ಪ್ರಿಯಕರನೊಂದಿಗೆ ದೂರವಿರುವಂತೆ ತಾಯಿ ವಾರ್ನ್
– ಮನವಿ ಮಾಡಿಕೊಂಡ್ರೂ ಮೊಬೈಲ್ ಕೊಡದ ತಾಯಿ
ಕೊಲಂಬೊ: ಪ್ರಿಯಕರನಿಗೆ ಫೋನ್ ಮಾಡುವುದನ್ನು ತಡೆಯಲು ತಾಯಿ ಮೊಬೈಲ್ ಫೋನ್ ಕಿತ್ತುಕೊಂಡಿದ್ದಕ್ಕೆ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
20 ವರ್ಷದ ಡಿ.ಹಾಶಿನಿ ಪಿಯಮಿಕಾ ಮೃತ ಯುವತಿ. ಶ್ರೀಲಂಕಾದ ಪುಟ್ಟಲಂನಲ್ಲಿ ಈ ಘಟನೆ ನಡೆದಿದ್ದು, ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಯುವತಿ ಮೃತಪಟ್ಟಿದ್ದಾಳೆ.
ಮೃತ ಹಾಶಿನಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ತಾಯಿಗೆ ಇಷ್ಟ ಇರಲಿಲ್ಲ. ಹೀಗಾಗಿ ತಮ್ಮ ಪ್ರೀತಿಯ ಸಂಬಂಧವನ್ನು ಮುರಿದುಕೊಳ್ಳುವಂತೆ ಮಗಳಿಗೆ ತಾಯಿ ಅನೇಕ ಬಾರಿ ಹೇಳಿದ್ದರು. ಆದರೂ ಹಾಶಿನಿ ಮೊಬೈಲ್‍ನಲ್ಲಿ ಪ್ರಿಯಕರನೊಂದಿಗೆ ನಿರಂತರವಾಗಿ ಮಾತನಾಡುತ್ತಲೇ ಇದ್ದಳು.
ಇದರಿಂದ ಕೋಪಗೊಂಡ ತಾಯಿ ಮಗಳಿಂದ ಮೊಬೈಲ್ ಕಿತ್ತುಕೊಂಡು ಬಚ್ಚಿಟ್ಟಿದ್ದರು. ಆಗ ಹಾಶಿನಿ ಮೊಬೈಲ್ ಹಿಂದಿರುಗಿಸುವಂತೆ ಕೇಳಿದ್ದಾಳೆ. ಆದರೆ ತಾಯಿ ಫೋನ್‍ನನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
ಕೊನೆಗೆ ಮೊಬೈಲ್ ಫೋನ್ ಹಿಂದಿರುಗಿಸುವಂತೆ ತಾಯಿಯ ಬಳಿ ಹಾಶಿನಿ ಮನವಿ ಮಾಡಿಕೊಂಡಿದ್ದಾಳೆ. ಆದರೂ ತಾಯಿ ಫೋನ್ ಕೊಟ್ಟಿಲ್ಲ. ಇದೇ ನೋವಿನಿಂದ ಹಾಶಿನಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಾಶಿನಿ ಸಾವನ್ನಪ್ಪಿದ್ದಾಳೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.