ಬೆಂಗಳೂರು: ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷರ ಡಿ.ಕೆ.ಶಿವಕುಮಾರ್ ಆರೋಪ ಸತ್ಯ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಆರೋಪವಲ್ಲ, ಅದು ಸತ್ಯ. ಕಳೆದ 15 ದಿನಗಳಿಂದ ಫೋನ್‍ನಲ್ಲಿ ಮಾತನಾಡುವಾಗ ಡಿಸ್ಟರ್ಬೆನ್ಸ್ ಆಗುತ್ತಿದೆ. ಕೆಲವರು ದೂರು ಕೊಡುವಂತೆ ಹೇಳಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.
Advertisement
Advertisement
ಬಿಜೆಪಿಯವರು ಫೋನ್ ಕದ್ದಾಲಿಕೆಯಲ್ಲಿ ಎಕ್ಸ್ ಪರ್ಟ್, ಬೇರೆಯವರ ಮೇಲೆ ಹಾಕಿ ಇವರು ತಪ್ಪಿಸಿಕೊಳ್ಳುವುದಲ್ಲ. ಒಂದು ಪಕ್ಷದ ಅಧ್ಯಕ್ಷರು ಈ ಕುರಿತು ಗಂಭೀರವಾಗಿ ಆರೋಪ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹಗರಣ ಮಾಡೋಕೆ ಅವಕಾಶವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಗೃಹ ಸಚಿವರು ಲಘುವಾಗಿ ಮಾತನಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಫೋನ್ ಕದ್ದಾಲಿಕೆ ಮಾಡುವ ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ: ಸುಧಾಕರ್
Advertisement
ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮೊದಲು ಪರಿಗಣಿಸಬೇಕು. ಇಲ್ಲವಾದರೆ ನಾನೇ ಕೇಂದ್ರ ಸರ್ಕಾರಕ್ಕೆ ಬರೆಯುತ್ತೇನೆ. ಡಿಜೆ ಹಳ್ಳಿ ಪ್ರಕರಣಕ್ಕೂ ಟ್ಯಾಪಿಂಗ್ ಗೂ ಸಂಬಂಧವಿಲ್ಲ. ಡಿಜೆ ಹಳ್ಳಿ ಪ್ರಕರಣ ಮುಚ್ಚಿಹಾಕೋಕೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ವಾಸ್ತವಾಂಶವೇ ಬೇರೆ ಇದೆ. ಬಿಬಿಎಂಪಿ ಚುನಾವಣೆಗಳು ಬರುತ್ತಿವೆ. ಹೀಗಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕಾಗಿ ಪೊಲೀಸರ ಮೇಲೆ ಒತ್ತಡ ತರುತ್ತಿದ್ದಾರೆ. ಸಾವಿನ ಮೇಲೆ ಹೆಣದ ರಾಜಕೀಯ ಮಾಡಿದರು. ಈಗ ಈ ಪ್ರಕರಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಡಿಜೆ ಹಳ್ಳಿ ಪ್ರಕರಣದಲ್ಲಿ ಇಂಟೆಲಿಜೆನ್ಸ್ ವೈಫಲ್ಯವಿದೆ. ಅದನ್ನ ಮುಚ್ಚಿ ಹಾಕೋಕೆ ಬೇರೆ ಕಥೆ ಸೃಷ್ಟಿಸುತ್ತಿದ್ದಾರೆ. ಆದರೆ ಈ ಗಲಾಟೆಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಸರ್ಕಾರ ಅದನ್ನ ಒಪ್ಪಿಕೊಳ್ಳಬೇಕು. ಇದನ್ನು ಮುಚ್ಚಿಹಾಕುವ ಕೆಲಸ ಮಾಡಬಾರದು. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.