– ಬಾಂಬರ್ ಆದಿತ್ಯ ರಾವ್ ಈತನಿಗೆ ರೋಲ್ ಮಾಡೆಲ್
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ತನ್ನ ಪ್ರಚಾರದ ಹುಚ್ಚಿಗೆ ಈತ ಇದೀಗ ಜೈಲಿನ ಕಂಬಿ ಎಣಿಸಲು ಆರಂಭಿಸಿದ್ದಾನೆ.
Advertisement
ಆಗಸ್ಟ್ 19 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ್ ರಾವ್ ಅವರಿಗೆ ಒಂದು ಮೊಬೈಲು ಕರೆ ಬಂದಿದ್ದು, ಕರೆ ಮಾಡಿದ್ದ ವ್ಯಕ್ತಿ ತಾನು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡ ಮಾಜಿ ನಿರ್ದೇಶಕರು ಈ ವಿಚಾರವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರ ಗಮನಕ್ಕೆ ತಂದಿದ್ದರು.
Advertisement
Advertisement
ವಿಮಾನ ನಿಲ್ದಾಣದಿಂದ ಮಂಗಳೂರು ಪೋಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ, ಬಾಂಬ್ ಕರೆಯ ಜಾಡನ್ನು ಪತ್ತೆ ಹಚ್ಚಲು ಪೊಲೀಸರು ಆರಂಭಿಸಿದ್ದರು. ಮೊಬೈಲ್ ಸಂಖ್ಯೆಯನ್ನು ಬೆನ್ನತ್ತಿ ಹೋದ ಮಂಗಳೂರು ಪೊಲೀಸರಿಗೆ ಈ ಕರೆ ಉಡುಪಿ ಜಿಲ್ಲೆಯ ಮುದ್ರಾಡಿ ಪರಿಸರದಿಂದ ಬಂದಿರುವುದು ತಿಳಿದು ಬಂದಿತ್ತು. ಮುದ್ರಾಡಿಯ ಪೊಯ್ಯುದಲ್ ಬಲ್ಲಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ (33) ನಿಗೆ ಸೇರಿದ ಮೊಬೈಲ್ ಸಂಖ್ಯೆ ಆಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿ ಮಂಗಳೂರಿಗೆ ತಂದು ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆ ಮಂಗಳೂರು ಪೊಲೀಸರೇ ಆರೋಪಿಯ ಹೇಳಿಕೆ ಕೇಳಿ ಬಿಚ್ಚಿ ಬಿದ್ದಿದ್ದಾರೆ. ಪೋಲೀಸ್ ತನಿಖೆಯ ವೇಳೆ ಈತ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದು, ಪ್ರಚಾರಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ.
Advertisement
ಜನವರಿ ತಿಂಗಳಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಸ್ಫೋಟಕವೊಂದನ್ನು ಇರಿಸಿ ದೇಶ ಹಾಗೂ ವಿದೇಶಗಳಲ್ಲಿ ಒಂದೇ ದಿನದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಇದನ್ನೇ ರೋಲ್ ಮಾಡಲ್ ಆಗಿ ತೆಗೆದುಕೊಂಡ ಆರೋಪಿ ವಸಂತ್ ಗೂಗಲ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂಬರ್ ಹುಡುಕಿದ್ದಾನೆ. ಕೇವಲ 8ನೇ ತರಗತಿ ಕಲಿತಿರುವ ಈತನಿಗೆ ಗೂಗಲ್ ನಲ್ಲಿ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ್ ರಾವ್ ನಂಬರ್ ಸಿಕ್ಕಿದೆ. ಅವರನ್ನೇ ನಿಲ್ದಾಣದ ನಿರ್ದೇಶಕರು ಎಂದು ತಿಳಿದು ಆತ ಬೆದರಿಕೆಯ ಕರೆ ಮಾಡಿದ್ದಾನೆ. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟಿಗೆ ಹುಸಿಬಾಂಬ್ ಕರೆ- ಕಾರ್ಕಳ ಯುವಕನ ಬಂಧನ
ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ, ಹಾಗೂ ಇತರ ಸೆಕ್ಷನ್ ಮೂಲಕ ಆರೋಪಿಯನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ. ಜಾಮೀನು ರಹಿತ ಸೆಕ್ಷನ್ ಮೇಲೆ ಆರೋಪಿಯನ್ನು ಬಂಧಿಸಿರುವ ಪೋಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.