ಬೆಂಗಳೂರು: ನಗರ ಹೊರವಲಯದ ಹೆಸರಘಟ್ಟದಲ್ಲಿ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ-ಐ.ಐ.ಎಚ್.ಆರ್ ಕಳೆದ ಐದು ದಶಕಗಳಿಂದ ಸಾಕಷ್ಟು ತಳಿ ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಂಸ್ಥೆ ತನ್ನ ಆವರಣದಲ್ಲಿ ಫೆಬ್ರವರಿ 8 ರಿಂದ 12ವರೆಗೆ 5 ದಿನದ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಹಮ್ಮಿಕೊಂಡಿದೆ.
Advertisement
ಹೆಸರಘಟ್ಟದಲ್ಲಿರುವ ಐ.ಐ.ಎಚ್.ಆರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ 5 ದಿನದ ಮೇಳದ ಕುರಿತು ವಿವರ ನೀಡಿದ ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್, ಈ ಬಾರಿ ”ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಭಾರತಕ್ಕಾಗಿ ತೋಟಗಾರಿಕೆ” ಎಂಬ ಧ್ಯೇಯೋದ್ಯೇಶದೊಂದಿಗೆ ಐದು ದಿನಗಳ ಕಾಲ ತೋಟಗಾರಿಕೆ ಮೇಳವನ್ನು ಆಯೋಜಿಸಿದ್ದು, ತೋಟಗಾರಿಕಾ ಕ್ಷೇತ್ರದಲ್ಲಿ ರೈತನಿಗೆ ಸಾಕಷ್ಟು ಉದ್ಯಮಿಯಾಗಲು ಅವಕಾಶವಿದ್ದು, ಅದನ್ನು ತೋರಿಸಿಕೊಡಲು ಈ ಮೇಳವನ್ನು ಏರ್ಪಡಿಸಲಾಗಿದೆ ಎಂದರು.
Advertisement
Advertisement
ಬೀಜೋತ್ಪಾದನೆ ಸೇರಿದಂತೆ ಮುಖ್ಯವಾಗಿ ಸಂಸ್ಥೆಯು ಸಂಶೋಧಿಸಿದ ತಳಿಗಳು ರೋಗ ನಿರೋಧಕ ಶಕ್ತಿ ಹೊಂದಿದ್ದು, ಅದೇ ರೀತಿ ಮೌಲ್ಯಧಾರಿತ ಉತ್ಪನ್ನಗಳಾಗಿವೆ. ಹಾಗೆ ತೋಟಗಾರಿಕೆ ಸಂಬಂಧಿಸಿದ ಸುಲಭ ತಂತ್ರಜ್ಞಾನ ಯಂತ್ರಗಳು ಈ ತೋಟಗಾರಿಕಾ ಮೇಳದಲ್ಲಿ ಪ್ರದರ್ಶನಕ್ಕೀರುತ್ತವೆ ಎಂದು ಅವರು ಹೇಳಿದರು. ಈ ಬಾರಿಯ ತೋಟಗಾರಿಕಾ ಮೇಳಕ್ಕೆ ಸಾಕಷ್ಟು ಖಾಸಗಿ ಕಂಪನಿಗಳು ಕೂಡ ಭಾಗವಹಿಸುತ್ತಿವೆ. ತೋಟಗಾರಿಕೆಗೆ ಹೊಂದಿಕೊಂಡಂತೆ ಖಾಸಗಿ ಕಂಪನಿಗಳು ಯಾವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುವುದನ್ನು ಇಲ್ಲಿ ಪ್ರದರ್ಶನಕ್ಕೀಡಲಾಗುತ್ತದೆ ಎಂದು ತಿಳಿಸಿದರು.
Advertisement
ಮೊದಲ ಬಾರಿಗೆ ಅನ್ ಲೈನ್ ಮೇಳ
ಈ ಬಾರಿಯ ಮೇಳವನ್ನು ವರ್ಚವಲ್ ಮೂಲಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಲಿದ್ದು, ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೇಳವು ಅಫ್ ಲೈನ್ ಹಾಗೂ ಆನ್ ಲೈನ್ ಮೂಲಕ ನಡೆಯಲಿದೆ. ವಿಶೇಷವಾಗಿ ಈ ಬಾರಿ ಮೇಳದಲ್ಲಿ ಭಾಗವಹಿಸಲು ರೈತರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕಾಗಿರುವುದರಿಂದ ಮೇಳದಲ್ಲಿ ವಿವಿಧ ರಾಜ್ಯಗಳ 30 ಸಾವಿರ ರೈತರು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಆನ್ ಲೈನ್ ಮೂಲಕ ದೇಶದಾದ್ಯಂತ ರೈತರು ಭಾಗವಹಿಸಲು ಅವಕಾಶ ಇದ್ದು, ಆನ್ ಲೈನ್ ನೋಂದಣಿಗೆ ಈಗಾಗಲೇ ಕೃಷಿ ವಿಜ್ಞಾನ ಕೇಂದ್ರಗಳ ನೆರವು ಪಡೆಯಲಾಗಿದೆ. 11 ಅಟಾರಿ ಕೇಂದ್ರಗಳ 721 ಕೆವಿಕೆ ಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೇಳದಲ್ಲಿ 211 ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ಪ್ರದರ್ಶಿಸಲಾಗುತ್ತದೆ. ಆಯಾ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ರೈತರು ಆನ್ ಲೈನ್ ಮೂಲಕ ನೋಂದಾಯಿಸಿ ಮೇಳದಲ್ಲಿ ಪಾಲ್ಗೊಳ್ಳಬಹುದು. ಕೃಷಿ ವಿಜ್ಞಾನಿಗಳ ಜತೆ ದ್ವಿಮುಖ ಸಂಹವನದ ವ್ಯವಸ್ಥೆ ಇದೆ. ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಜ್ಞಾನಿಗಳ ಜತೆ ಹಂಚಿಕೊಂಡು ಪರಿಹಾರ ಪಡೆಯಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಪ್ರಧಾನ ಕೃಷಿ ವಿಜ್ಞಾನಿ ಮತ್ತು ಆಯೋಜನಾ ಕಾರ್ಯದರ್ಶಿ ಡಾ. ಎಂ.ಎ. ಧನಂಜಯ ಮಾತನಾಡಿ, ಈ ಬಾರಿಯ ಮೇಳದಲ್ಲಿ ತೋಟಗಾರಿಕೆಯನ್ನು ಉದ್ಯಮವಾಗಿ ಉತ್ತೇಜಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಂಕಷ್ಟವನ್ನೇ ಕಂಡಿರುವ ರೈತರಿಗೆ ನೆರವಾಗಲು ಮತ್ತು ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಲು ಅವರಿಗೆ ಮೇಳದಲ್ಲಿ ಎಲ್ಲಾ ರೀತಿಯ ಸಲಹೆ-ಸಹಕಾರವನ್ನು ನೀಡಲಾಗುತ್ತದೆ ಇದರೊಂದಿಗೆ ಸಂಸ್ಥೆಯ ಕೃಷಿ ವಿಜ್ಞಾನಿಗಳು ರೈತರಿಗೆ ಈ ಕುರಿತು ಅಗತ್ಯ ಮಾರ್ಗದರ್ಶನಗಳನ್ನು ನೀಡುತ್ತಾರೆ. ಜತೆಗೆ ತೋಟಗಾರಿಕೆ ಪ್ರಾತ್ಯಕ್ಷಿಕೆಗಳ ನೈಜ ಮಾದರಿಗಳನ್ನು ರೈತರಿಗೆ ತೋರಿಸುವ ಮೂಲಕ ಅವರಿಗೆ ತೋಟಗಾರಿಕೆ ಉತ್ಪನ್ನಗಳನ್ನು, ಬೆಳೆಯುವ ವಿಧಾನ ಕುರಿತು ಇನಷ್ಟು ಉತ್ತೇಜನ ನೀಡಲಾಗುವುದು ಹಾಗೂ ಸಂಸ್ಥೆಯು ಅಭಿವೃದ್ದಿಪಡಿಸಿರುವ ತೋಟಗಾರಿಕೆ ಸಂಬಂಧಿಸಿದ ತಂತ್ರಜ್ಞಾನವನ್ನು ರೈತರಿಗೆ ಮೇಳದಲ್ಲಿ ಪರಿಚಯಿಸಲಾಗುವುದು ಎಂದರು.
ಪ್ರಧಾನ ವಿಜ್ಞಾನಿ ಡಾ. ಅಶ್ವತ್ಥ್ ಮಾತನಾಡಿ, ಮಾವಿನ ತೋಟದಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುವುದು ಹೇಗೆ ಮತ್ತು ಇದರಿಂದ ರೈತರು ತಮ್ಮ ಆದಾಯವನ್ನು ಯಾವ ರೀತಿ ದ್ವಿಗುಣಗೊಳಿಸಬಹುದು ಎನ್ನುವ ಕುರಿತು ತೋಟಗಾರಿಕೆ ಸಂಶೋಧನಾ ಸಂಸ್ಥೆ, ತೋಟಗಾರಿಕೆ ಮೇಳದಲ್ಲಿ ರೈತರಿಗೆ ಮಾಹಿತಿ ನೀಡಲಿದ್ದೇವೆ. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಆವರನ್ನು ಸಮಗ್ರ ಬೆಳೆ ಪದ್ದತಿಗೆ ಉತ್ತೇಜಿಸಿ ಆದಾಯವನ್ನು ದ್ವಿಗುಣಗೊಳಿಸುವ ಕ್ರಮಕ್ಕೆ ಸಂಸ್ಥೆ ಉತ್ತೇಜನ ನೀಡಲಿದೆ ಎಂದು ವಿವರಿಸಿದರು.
ಆನ್ ಲೈನ್ ಸೀಡ್ ಪೋರ್ಟಲ್
ಪ್ರಧಾನ ವಿಜ್ಞಾನಿ ಡಾ. ಸಿ.ಕೆ. ನಾರಾಯಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಪೋಟಿ ನಡೆಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ತನ್ನನ್ನು ತಾನು ಸಜ್ಜುಗೊಳಿಸಿಕೊಂಡಿದೆ. ಆನ್ ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಹಾಗೂ ಹೂ ಗಳ ಬೀಜಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ವಿನೂತನ ಪ್ರಯತ್ನದಲ್ಲಿ ತೊಡಗಿ ಯಶಸ್ಸುಗಳಿಸಿದೆ ಎಂದು ತಿಳಿಸಿದರು.
ಪಿ. ನಂದೀಶ್ ಮಾತನಾಡಿ, 20 ವಿವಿಧ ತರಕಾರಿಗಳ 60 ತಳಿಗಳ ಬೀಜಗಳನ್ನು ಬೀಜ ಗ್ರಾಮ ಯೋಜನೆ ಮೂಲಕ ರೈತರಿಂದ ಖರೀದಿಸಿ ಅವುಗಳನ್ನು ಆನ್ ಲೈನ್ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. 2020ರ ಮೇ ತಿಂಗಳಲ್ಲಿ ಚಾಲನೆಗೊಂಡ ಆನ್ ಲೈನ್ ಸೀಡ್ ಪೋರ್ಟಲ್, ಕೇವಲ 7 ರಿಂದ 8 ತಿಂಗಳ ಆವಧಿಯಲ್ಲಿ 70 ಲಕ್ಷ ರೂ.ಗಳ ವಹಿವಾಟು ನಡೆಸಿದೆ. ಆನ್ ಲೈನ್ ಸೀಡ್ ಪೋರ್ಟಲ್ ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಪ್ರಸಕ್ತ ವರ್ಷದಲ್ಲಿ 40 ರಿಂದ 50 ಟನ್ ಬೀಜ ಮಾರಾಟವನ್ನು ಆನ್ ಲೈನ್ ಪೋರ್ಟಲ್ ನಲ್ಲಿ ನಡೆಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.