ಲಕ್ನೋ: ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್‍ನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಆರೋಪಿಗಳನ್ನು ಮೊಹಮ್ಮದ್ ಕಫೀಲ್ ಮತ್ತು ರವಿಶಂಕರ್ ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಬುಲಂದರ್‍ಶಹರ್ ಜಿಲ್ಲೆಯ ನೋಯ್ಡಾದ ನಿವಾಸಿಗಳು. ಇಬ್ಬರು ಎರಡು ವರ್ಷದ ಒಪ್ಪಂದದ ಮೇಲೆ ಸ್ವಿಗ್ಗಿ ಡೆಲಿವರಿ ಬಾಯ್ಸ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ನೋಯ್ಡಾದ ಹೆಚ್ಚುವರಿ ಜಿಲ್ಲಾಧಿಕಾರಿ ರಣವಿಜಯ್ ಸಿಂಗ್, ಆರೋಪಿಗಳಿಬ್ಬರು ಗಾಲ್ಫ್ ಕೋರ್ಸ್ ಪ್ರದೇಶದ ಸುತ್ತಮುತ್ತಲಿರುವ ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದರು. ಈ ವೇಳೆ ಖಾಲಿ ಇರುವ ಮನೆ ಮತ್ತು ಭದ್ರತೆ ಹೊಂದಿರದ ಮನೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿಸುತ್ತಿದ್ದರು. ಬಳಿಕ ಅಂತಹ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಮತ್ತು ನಗದು ದರೋಡೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದೀಗ ಆರೋಪಿಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳ ಬಳಿ ಇದ್ದ 32 ಇಂಚಿನ ಎಲ್‍ಇಡಿ ಟಿವಿ, ಎರಡು ಟ್ರ್ಯಾಕ್ ಸೂಟ್, ಒಂದು ವಾಚ್, ಮೋಟಾರ್ ಬೈಸಿಕಲ್, ಸ್ವಿಗ್ಗಿ ಬ್ಯಾಗ್ ಮತ್ತು ಕಳ್ಳತನ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.