ವಾಷಿಂಗ್ಟನ್: ಅಮೆರಿಕ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆ ಇದೇ ಮೊದಲ ಬಾರಿಗೆ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳು ಹಿಂದೂಗಳ ಓಲೈಕೆಗೆ ಇಳಿದಿವೆ.
ಹೌದು. ಇಡಿ ವಿಶ್ವವೇ ಎದುರು ನೋಡುತ್ತಿರುವ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರೆಟಿಕ್‌ನಿಂದ ಜೋ ಬೈಡನ್ ಅಭ್ಯರ್ಥಿಗಳಾಗಿದ್ದು ಪ್ರಚಾರ ಜೋರಾಗಿದೆ.
ಸಾಧಾರಣವಾಗಿ ಅಮೆರಿಕ ಚುನಾವಣೆ ಅಲ್ಲಿನ ಸಮಸ್ಯೆ ಜೊತೆಗೆ ವಿಶ್ವದ ಸಮಸ್ಯೆಗಳನ್ನು ನಾವು ಹೇಗೆ ಪರಿಹಾರ ಮಾಡುತ್ತೇವೆ ಎಂಬುದನ್ನು ಅಧ್ಯಕ್ಷ ಅಭ್ಯರ್ಥಿಗಳು ಹೆಚ್ಚಾಗಿ ಪ್ರಸ್ತಾಪಿಸಿ ಮತದಾರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ ಈ ವಿಚಾರಗಳ ಜೊತೆಗೆ ಭಾರತೀಯರ ಮತದಾರರ ಓಲೈಸಲು ಎರಡೂ ಪಕ್ಷಗಳು ಭರವಸೆ ನೀಡಲು ಆರಂಭಿಸಿವೆ.
ಹಾಲಿ ಅಧ್ಯಕ್ಷ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಭಾರತೀಯರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್ ಬೆಂಬಲಿಗರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲೆಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಪ್ರಕಾರ, ‘ಅಮೆರಿಕ ಕಾ ನೇತಾ ಕೈಸಾ ಹೋ, ಜೋ ಬೈಡನ್ ಜೈಸಾ ಹೋ’(ಅಮೆರಿಕದ ನಾಯಕ ಹೇಗಿರಬೇಕು ಎಂದರೆ ಅದು ಬೈಡನ್ ರೀತಿ) ಎಂಬ ಘೋಷ ವಾಕ್ಯಗಳೊಂದಿಗೆ ಈಗಾಗಲೇ ಅಮೆರಿಕಾದ್ಯಂತ ಪ್ರಚಾರ ನಡೆಸಲಾಗುತ್ತಿದೆ.
ಜೋ ಬೈಡೆನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕ್ಯಾಲಿರ್ಫೋನಿಯಾದ ಸಂಸದೆ ಕಮಲ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಭಾರತೀಯರ ಮತ್ತು ಕಪ್ಪು ವರ್ಣೀಯರ ಮತ ಸೆಳೆಯಲು ಮುಂದಾಗಿದ್ದಾರೆ.
ಯಾರ ಭರವಸೆ ಏನು?
ಟ್ರಂಪ್ ಪರ ಪ್ರಚಾರಕರು ನಮ್ಮ ಪಕ್ಷವನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಅಮೆರಿಕದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇತ್ತ ಜೋ ಬೈಡನ್ ಪರ ಪ್ರಚಾರಕರು ಹಿಂದೂಗಳ ನಂಬಿಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿ ಓಲೈಸಿದ್ದಾರೆ.
ಮೂರು ದಿನಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಅಮೆರಿಕದ ಹಿಂದೂ ಸಮುದಾಯದ ಪ್ರಮುಖ ನಾಯಕಿ ನೀಲಿಮಾ ಗೋಣುಗುಂಟ್ಲಾ ಅವರು ಭಾಗವಹಿಸಿದ್ದರು. ಹಿಂದೂ ಸಮುದಾಯದ ಬೆಂಬಲವನ್ನು ಸೂಚಿಸುವ ಸಲುವಾಗಿ ನೀಲಿಮಾ ಭಾಗವಹಿಸಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.
ಯಾಕೆ ಈ ಓಲೈಕೆ?
2016ರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಹಿಂದೂ ಸಮುದಾಯದವರಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಬಲಪಂಥಿಯ ಹಿಂದೂಗಳು ಟ್ರಂಪ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು ಚುನಾವಣೆಯಲ್ಲಿ ಭಾರೀ ಪ್ರಭಾವ ಬೀರುವ ಪರಿಣಾಮ ಈ ರೀತಿಯ ಪ್ರಚಾರ ಟ್ರಂಪ್‌ಗೆ ನೆರವು ನೀಡಿತ್ತು.
ಅಮೆರಿಕ ನಂಬರ್ ಒನ್ ದೇಶವಾಗಿರುವ ಹಿಂದೆ ಭಾರತೀಯರ ಶ್ರಮವೂ ಇದೆ. ಅಮೆರಿಕಕ್ಕೆ ಎರಡನೇ ಅತಿ ಹೆಚ್ಚು ವಲಸೆ ಬಂದಿರುವುದು ಭಾರತೀಯರಿಂದ. ಬೌದ್ಧಿಕ ವಲಸೆಯಿಂದ ಅಮೆರಿಕಕ್ಕೆ ಅತ್ಯುತ್ತಮ ಶ್ರಮಿಕ ವರ್ಗ ಭಾರತದಿಂದ ಸಿಕ್ಕಿದೆ. ಪರಿಣಾಮ ತಂತ್ರಜ್ಞಾನ, ವೈದ್ಯಕೀಯ, ಸಂಶೋಧನೆ.. ಇತ್ಯಾದಿ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಮ್ಯಾಡಿಸನ್ ಸ್ಕ್ಯಾರ್ ಭಾಷಣ, ಕಳೆದ ವರ್ಷ ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋಡಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಭಾರತೀಯರ ಸಂಘಟನೆ ಮತ್ತು ಶಕ್ತಿ ಏನು ಎನ್ನುವುದು ಅಮೆರಿಕನ್ನರಿಗೆ ಗೊತ್ತಾಗಿದೆ. ಈ ಎಲ್ಲ ಕಾರಣಕ್ಕೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಎರಡೂ ಪಕ್ಷಗಳು ಭಾರತೀಯರ ಓಲೈಕೆಗೆ ಮುಂದಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕ ಅಮೆರಿಕ ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ.
2015ರಲ್ಲಿ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬರಾಕ್ ಒಬಾಮಾ ಆಗಮಿಸಿದ್ದರು. ಈ ವರ್ಷ ಟ್ರಂಪ್ ಭಾರತದ ಪ್ರವಾಸಕ್ಕೆ ಬಂದಾಗ ಅಹಮದಾಬಾದ್‍ನಲ್ಲಿ ‘ನಮಸ್ತೇ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೋವಿಡ್ 19 ವೇಳೆ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮ್ ಭಟ್ ಅವರು ವೇದ ಮಂತ್ರ ಪಠಣ, ಯಜುರ್ವೇದ ಮಂತ್ರ ಪಠಣ ಮಾಡಿದ್ದರು.