-ಯುವತಿ ಕುಟುಂಬಸ್ಥರು, ಗ್ರಾಮದ ಮುಖಂಡರಿಂದ ಧಮ್ಕಿ
ಜೈಪುರ: ಪ್ರೀತಿಸಿ ಮದುವೆಯಾದ ಜೋಡಿ ತಮಗೆ ರಕ್ಷಣೆ ನೀಡಬೇಕೆಂದು ಪೊಲೀಸರ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಬಾರಮೇರ್ ನಲ್ಲಿ ನಡೆದಿದೆ.
ಮಮತಾ (19) ಮತ್ತು ಮಫರಾಮ್ (23) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮನೆಯಿಂದ ಓಡಿ ಹೋಗಿ ಮದುವೆ ಸಹ ಆಗಿದ್ದಾರೆ. ಆದ್ರೆ ಯುವತಿಯ ಕುಟುಂಬಸ್ಥರು ಮತ್ತು ಗ್ರಾಮದ ಮುಖಂಡರು ಜೋಡಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇಬ್ಬರದ್ದು ಜಾಟ ಸಮುದಾಯ ಆಗಿದ್ರೂ ನಮ್ಮಿಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ನಮ್ಮಿಬ್ಬರ ಮದುವೆಯಿಂದ ಪತ್ನಿ ಕುಟುಂಬಸ್ಥರು ಕೋಪಗೊಂಡಿದ್ದು, ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಕುಟುಂಬದವರ ಜೊತೆ ಗ್ರಾಮದ ಮುಖಂಡರು ಸಹ ಕಿರುಕುಳ ನೀಡಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ನವದಂಪತಿ ಆರೋಪಿಸಿದ್ದಾರೆ.
ಇಬ್ಬರು ಸ್ವಇಚ್ಛೆಯ ಮೇರೆಗೆ ಕಾನೂನಿನ ಪ್ರಕಾರ ಮದುವೆ ಆಗಿದ್ದರು. ಬೆದರಿಕೆ ಹಿನ್ನೆಲೆ ದಂಪತಿಗೆ ಪೊಲೀಸ್ ರಕ್ಷಣೆ ನೀಡಲು ವ್ಯವಸ್ಥೆ ಮಾಡಲಾಗುವುದು. ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ ಎಂದು ಡಿವೈಎಸ್‍ಪಿ ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.