ಮೈಸೂರು: ಪ್ರೇಯಸಿಯ ಹತ್ಯೆ ಮಾಡಿದ ವಿವಾಹಿತ ವ್ಯಕ್ತಿ ನಂತರ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಂಬಾಳೆ ಕೊಪ್ಪಲು ಗ್ರಾಮದ ಎಚ್.ಎಂ.ಲೋಕೇಶ್(39) ತನ್ನ ಪ್ರೇಯಸಿ ನಾಗಮಂಗಲದ ಅಮೂಲ್ಯರನ್ನು ಹತ್ಯೆ ಮಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಹೊರವಲಯದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಹೋಟೆಲ್‍ನಲ್ಲಿ ಈ ಘಟನೆ ನಡೆದಿದೆ.
ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ಲೋಕೇಶ್ ಗೆ ಮದುವೆಯಾಗಿ, ಮಗಳು ಇದ್ದಳು. ಮೈಸೂರಿನ ಕಾಲೇಜಿನಲ್ಲಿ ಎಂಎಸ್‍ಸಿ ಓದುತ್ತಿದ್ದ ಅಮೂಲ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಅಮೂಲ್ಯ ತನ್ನನ್ನು ಮದುವೆಯಾಗುವಂತೆ ಲೋಕೇಶ್ ನನ್ನು ಒತ್ತಾಯಿಸಿದ್ದಳು. ಈ ಕಾರಣ ನಿನ್ನೆ ಬೆಳಗ್ಗೆ ಮೈಸೂರಿನ ಹೊರವಲಯದ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಗೆ ಯುವತಿಯನ್ನು ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದಾನೆ.
ನಂತರ ತನ್ನ ಸ್ನೇಹಿತನಿಗೆ ಫೋನ್ ಮಾಡಿ ಹತ್ಯೆ ವಿಚಾರ ತಿಳಿಸಿ ಯುವತಿಯ ದೇಹವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇದಕ್ಕೆ ಸಹಾಯ ಮಾಡುವಂತೆ ಕೇಳಿದ್ದಾನೆ. ಸ್ನೇಹಿತ ಇದಕ್ಕೆ ಒಪ್ಪಿಲ್ಲ. ಅದರೂ ತನ್ನ ಮತ್ತೊಬ್ಬ ಸ್ನೇಹಿತನ ಜತೆ ಹೋಟೆಲ್‍ಗೆ ಬಂದಿದ್ದಾನೆ. ಆಗ ಬಾಗಿಲು ತೆಗೆಯದಿದ್ದಾಗ, ಫೋನ್ ಕೂಡ ರಿಸೀವ್ ಮಾಡದೆ ಇದ್ದಾಗ ಅನುಮಾನಗೊಂಡು ಬಾಗಿಲು ತೆಗೆಸಿದಾಗ ಪ್ರೇಯಸಿಯನ್ನು ಹತ್ಯೆ ಮಾಡಿದ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.