– ಮದುವೆಯಾಗುವುದಾಗಿ ಹೇಳಿ ಮೋಸ
ಚಾಮರಾಜನಗರ: ಮದುವೆಯಾಗುವುದಾಗಿ ಪುಸಲಾಯಿಸಿ ಪ್ರೀತಿಸಿ ಯುವತಿಯಿಂದ ಅಶ್ಲೀಲ ಫೋಟೋ ಕಳುಹಿಸಿಕೊಂಡು ಆಕೆಯ ಕುಟುಂಬದವರಿಗೆ ರವಾನಿಸಿ ಬೆದರಿಕೆ ಹಾಕುತ್ತಿದ್ದ ಯುವಕನೋರ್ವನನ್ನು ಕೊಳ್ಳೇಗಾಲ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಮದ್ದೂರಿನ ಟಿ.ಕೆ ಹಳ್ಳಿಯ ಪ್ರಶಾಂತ್ ಬಂಧಿತ ಆರೋಪಿಯಾಗಿದ್ದಾನೆ. ಈತ ಯುವಕ ಕೊಳ್ಳೇಗಾಲದ ಶಂಕರಪುರ ಗ್ರಾಮದ ಯುವತಿಯನ್ನು ಕಳೆದ ಮೂರು ವರ್ಷದಿಂದ ಲವ್ ಮಾಡುತ್ತಿದ್ದನು. ಯುವತಿಯಿಂದ ಅಶ್ಲೀಲ ಫೋಟೋಗಳನ್ನು ಪಡೆದು ಆಕೆಯ ಕುಟುಂಬಸ್ಥರಿಗೆ ರವಾನಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದ.
ಪ್ರಶಾಂತ್ ಮತ್ತು ನಾನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಮದುವೆಯಾಗುವುದಾಗಿ ನಂಬಿಸಿದ್ದನು. ನಮ್ಮಿಬ್ಬರ ಪ್ರೇಮ ವಿಚಾರ ಮನೆಯವರಿಗೆ ತಿಳಿದು ಮದುವೆ ವಿಚಾರವನ್ನು ನಿರಾಕರಿಸಿದ್ದರು. ಮನೆಯವರ ಮಾತಿನಂತೆ ಕೆಲ ದಿನಗಳ ಕಾಲ ಸುಮ್ಮನಿದ್ದನು. ಇಷ್ಟಕ್ಕೆ ಸುಮ್ಮನಿರದ ಪ್ರಶಾಂತ್ ಕರೆ ಮಾಡಿ ನಿನ್ನ ಅಶ್ಲೀಲ ಫೋಟೋ ಕಳುಹಿಸು ಇಲ್ಲವಾದರೇ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದನು. ಈತನ ಮಾತಿಗೆ ಮಣಿದು ನನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದೆ. ಆದರೆ ಕೆಲ ದಿನ ಬಳಿಕ ಅಶ್ಲೀಲ ಫೋಟೋಗಳನ್ನು ನನ್ನ ಮನೆಯವರ ಫೋನ್‍ಗಳಿಗೆ ರವಾನಿಸಿ ವಿಕೃತಿ ಮೆರೆದಿದ್ದದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಶಾಂತ್‍ನನ್ನು ಬಂಧಿಸಿದ್ದಾರೆ.