– ತಾಯಿಗೆ ಬೇರೊಬ್ಬ ವ್ಯಕ್ತಿಯಿಂದ ತಿಲಕ, ಹೂ ಮುಡಿಸಿದ್ರು
– ಸಹಾಯಕ್ಕೆ ಬಂದ ಮಹಿಳೆಯರ ಜೊತೆ ಅಸಭ್ಯ ವರ್ತನೆ
– ಭಯಗೊಂಡ ಪತಿ ಊರಿನಿಂದ ಪಲಾಯನ
– ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೀಡಿಯೋ ಹರಿ ಬಿಟ್ಟ ನೀಚರು
ಪಾಟ್ನಾ: ಮಹಿಳೆಯ ಕೂದಲು ಕಟ್ ಮಾಡಿ, ವಿವಸ್ತ್ರಗೊಳಿಸಿ ಹಲ್ಲೆಗೈದಿರುವ ಅಮಾನವೀಯ ಘಟನೆ ಬಿಹಾರದ ದರ್ಬಾಂಗ್ ಜಿಲ್ಲೆಯ ಘನಶ್ಯಾಂಪುರ ವ್ಯಾಪ್ತಿಯ ಆಧಾರಪುರ ಗ್ರಾಮದಲ್ಲಿ ನಡೆದಿದೆ.
ಮಹಿಳೆಯ ಪುತ್ರ ಅನ್ಯ ಜಾತಿಯ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದನು. ಇದರಿಂದ ಕೋಪಗೊಂಡ ಯುವತಿ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮೃಗೀಯವಾಗಿ ನಡೆದುಕೊಂಡಿದ್ದಾರೆ. ಮಹಿಳೆಯನ್ನ ಹೊರಗೆ ಕರೆ ತಂದ ನೀಚರು ಕೂದಲು ಕತ್ತರಿಸಿ ಅರೆನಗ್ನಳನ್ನಾಗಿ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನೀಚರು, ಬೇರೊಬ್ಬ ವ್ಯಕ್ತಿಯಿಂದ ಮಹಿಳೆ ಹಣೆಗೆ ತಿಲಕ (ಸಿಂಧೂರ) ಇರಿಸಿ, ಹೂ ಮುಡಿಸಿ ಹಾರ ಹಾಕಿದ್ದಾರೆ. ಘಟನೆಯ ಎಲ್ಲ ದೃಶ್ಯಗಳನ್ನ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಕುಟುಂಬದ ಮೇಲೆ ಹಲ್ಲೆ ಆಗುತ್ತಿದ್ದಂತೆ ಸಂತ್ರಸ್ತೆಯ ಪತಿ ಗ್ರಾಮದಿಂದಲೇ ಕಾಲ್ಕಿತ್ತಿದ್ದಾನೆ. ಇನ್ನು ಮಹಿಳೆಯ ಸಹಾಯಕ್ಕೆ ಬಂದ ಆಕೆಯ ಅತ್ತೆ, ನಾದಿನಿ, ಅತ್ತಿಗೆ ಮತ್ತು ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಮನೆಯೊಳಗೆ ನುಗ್ಗಿದವರು ದರೋಡೆ ಸಹ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮಹಿಳೆಯನ್ನ ದರ್ಬಾಂಗ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಹಲ್ಲೆಗೊಳಗಾದ ಮಹಿಳೆಯ ಪುತ್ರ ಸೋನು ಜಾ ಅದೇ ಗ್ರಾಮದ ಅರುಣ್ ಎಂಬಾತನ ಮಗಳನ್ನು ಪ್ರೇಮಿಸಿ ಮದುವೆಯಾಗಿದ್ದನು. ನವೆಂಬರ್ 12ರಂದು ಪರೀಕ್ಷೆಗೆಂದು ಮನೆಯಿಂದ ಹೋಗಿದ್ದ ಯುವತಿ ಸೋನು ಜೊತೆ ಓಡಿ ಹೋಗಿ ದೆಹಲಿಯಲ್ಲಿ ಮದುವೆಯಾಗಿದ್ದು, ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇತ್ತ ಯುವತಿಯ ಪೋಷಕರ ಮಗಳ ಹುಡುಕಾಟದಲ್ಲಿದ್ದಾಗ ಮದುವೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ನೋಡಿ ಯುವಕನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ.
ಎರಡೂ ಕುಟುಂಬಗಳು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಲಾಗುತ್ತಿದೆ ಎಂದು ಎಸ್.ಪಿ. ದಿಲೀಪ್ ಕುಮರ್ ಮಾಹಿತಿ ನೀಡಿದ್ದಾರೆ.