– ಮಹಿಳೆಯರು ಎನ್ನದೇ ಕೊಚ್ಚಿ ಕೊಲೆಗೈದ ಪಾಪಿಗಳು
ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧದಿಂದ ಶುರುವಾದ ಗಲಾಟೆ ಇಂದು ನಾಲ್ಕು ಜನರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದೆ. ಇಡೀ ರಾಯಚೂರು ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಹಾಡುಗಲೇ ನಡುರಸ್ತೆಯಲ್ಲಿ ನಾಲ್ಕು ಜನರ ಹತ್ಯೆ ಮಾಡಲಾಗಿದೆ.
ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. 38 ವರ್ಷದ ನಾಗರಾಜ್, 40 ವರ್ಷದ ಹನುಮೇಶ್, 55 ವರ್ಷದ ಸುಮಿತ್ರ ಹಾಗೂ 30 ವರ್ಷದ ಶ್ರೀದೇವಿ ಹತ್ಯೆಗೀಡಾಗಿದ್ದಾರೆ. ಮದುವೆಯಾದ ಯುವಕನ ತಾಯಿ, ಅತ್ತಿಗೆ, ಇಬ್ಬರು ಅಣ್ಣಂದಿರ ಕೊಲೆಯಾಗಿದೆ. ಗಲಾಟೆಯಲ್ಲಿ ಈರಪ್ಪ, ರೇವತಿ, ತಾಯಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಬಣ್ಣ ಹಾಗೂ ಫಕೀರಪ್ಪ ಸೇರಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಐದು ತಿಂಗಳ ಹಿಂದೆ ಒಂದೇ ಕೋಮಿನ ಮೌನೇಶ್ ಹಾಗೂ ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ವಿರೋಧದ ನಡುವೆಯೂ ಮದುವೆಯಾಗಿದ್ದ ಯುವಕ ಮತ್ತು ಯುವತಿ ಒಟ್ಟಾಗಿ ಸಂಸಾರ ನಡಸಿದ್ದರು. ಇದೇ ಹಿನ್ನೆಲೆಯಿಂದ ಇಂದು ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿತ್ತು.
ಇದೇ ಗಲಾಟೆ ವಿಕೋಪಕ್ಕೆ ತಿರುಗಿ ಸಂಜೆ ವೇಳೆಗೆ ಯುವತಿಯ ಮನೆಯವರಿಂದ ಯುವಕನ ಮನೆಯ ನಾಲ್ವರ ಹತ್ಯೆಯಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜೀವ ಭಯದಿಂದ ಮೌನೇಶ್ ಹಾಗೂ ಮಂಜುಳ ಪೊಲೀಸ್ ಠಾಣೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ನಡೆದಿದೆ.