ಪ್ರೀತಿ, ಪ್ರೇಮ ಅಂತಿದ್ದ ಯುವಕನ ಅನುಮಾನಾಸ್ಪದ ಸಾವು

Public TV
1 Min Read
333

– ತೇರಹಳ್ಳಿ ಬೆಟ್ಟದ ಮೇಲೆ ಶವ ಪತ್ತೆ

ಕೋಲಾರ: ಪ್ರೀತಿ ಪ್ರೇಮದ ಗಲಾಟೆ ನಡುವೆ ಯುವಕ ನಿಗೂಢವಾಗಿ ಕಾಣೆಯಾಗಿ ಈಗ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮೃತನನ್ನು ಭರತ್(20) ಎಂದು ಗುರುತಿಸಲಾಗಿದೆ. ಈತ ಕೋಲಾರದ ಗಾಂಧಿನಗರದ ನಿವಾಸಿಯಾಗಿದ್ದಾನೆ. ಕಳೆದ ಏಳು ದಿನಗಳ ಹಿಂದೆ ಸ್ಕಾಲರ್ ಶಿಪ್‍ಗೆ ಅರ್ಜಿ ಹಾಕಿ ಬರ್ತೀನಿ ಎಂದು ಹೇಳಿ ಹೋದವನು ಏಕಾಏಕಿ ಕಾಣೆಯಾಗಿದ್ದನು. ಇದೀಗ ಭರತ್ ಶವ ತೇರಹಳ್ಳಿ ಬೆಟ್ಟದ ಮೇಲೆ ಪತ್ತೆಯಾಗಿದೆ.

True Love 1024x626 1

ಭರತ್ ನಾಪತ್ತೆಯಾಗಿರುವುದನ್ನು ಗಮನಿಸಿದ ಮನೆಯವರು ಸಂಬಂಧಿಕರ ಮನೆ, ಸ್ನೇಹಿತರ ಮನೆ ಎಲ್ಲೆಡೆ ಹುಡುಕಾಡಿದ್ದಾರೆ. ಎಲ್ಲೂ ಸಿಗದೆ ಹೋದಾಗ ಕೋಲಾರದ ಗಲ್‍ಪೇಟೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು. ದೂರು ಕೊಟ್ಟು ಏಳು ದಿನವಾದರೂ ಪೊಲೀಸರಿಂದ ಕಾಣಿಯಾದವನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಪತ್ತೆಯಾಗಿದ್ದ ಭರತ್ ಶವ ಇಂದು ಮದ್ಯಾಹ್ನ ಕೋಲಾರ ತೇರಹಳ್ಳಿ ಬೆಟ್ಟದ ಮೇಲೆ ಪತ್ತೆಯಾಗಿದೆ.

love hand wedding valentine day together holding hand 38810 3580 medium

ಮೈಮೇಲೆ ಗಾಯಗಳ ಗುರುತುಗಳಿವೆ. ಮೈಮೇಲೆ ಇರುವ ಬಟ್ಟೆಗಳನ್ನು ಕೂಡಾ ಹರಿದು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದರಿಂದ ಸಂಬಂಧಿಕರು ಭರತ್‍ನನ್ನು ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಇದಕ್ಕೆ ಪೊಲೀಸರೇ ಪರೋಕ್ಷ ಕಾರಣ ಎಂದು ಆರೋಪಿಸುತ್ತಿದ್ದಾರೆ.

crime medium

ಕುಟುಂಬಸ್ಥರು ಹೇಳುವಂತೆ ಅನುಮಾನಾಸ್ಪದವಾಗಿ ಸಾವಿಗೀಡಾದ ಭರತ್‍ನನ್ನು ಶ್ರೀನಿವಾಸಪುರದ ಒಂದು ಹುಡುಗಿ ಪ್ರೀತಿಸುವಂತೆ ಹಿಂಸೆ ಮಾಡುತ್ತಿದ್ದಳು. ಈ ವಿಷಯ ಹುಡುಗಿಯ ಮನೆಯವರಿಗೆ ಗೊತ್ತಾಗಿ ಅವರು ಭರತ್‍ನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ಹಾಗಾಗಿ ಭರತ್ ಕಾಣೆಯಾದಗಲೂ ಭರತ್ ಕುಟುಂಬಸ್ಥರು ಆ ಹುಡುಗಿಯ ಕುಟುಂಬದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

Police Jeep

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೇರಹಳ್ಳಿ ಬೆಟ್ಟದ ಮೇಲೆ ಶವ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಭರತ್‍ನನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಭರತ್‍ನ ಸಾವು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾವಿಗೆ ಕಾರಣ ಏನು ಅನ್ನೋದನ್ನು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.

Share This Article