ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಪ್ರೀತಿ ವಿಷಯಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ಕುತ್ತಿಗೆಗೆ ತಲ್ವಾರ್ ಬೀಸಿದ ಘಟನೆಯೊಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ಪಾಗಲ್ ಪ್ರೇಮಿಯನ್ನು ಇಮ್ತಿಯಾಜ್ ಎಂದು ಗುರುತಿಸಲಾಗಿದೆ. ಈತ ಬೆಳ್ಳಂಬೆಳಗ್ಗೆ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದಾನೆ. ಮಾಸ್ಕ್ ಹಾಕಿಕೊಂಡು ಬಂದು ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ.
ಕುಂದಗೋಳ ತಾಲೂಕಿನ ಕುಂಕುರ ಗ್ರಾಮದ ಆಟೋ ಚಾಲಕ ಇಮ್ತಿಯಾಜ್, ಕಳೆದ ಎರಡು ವರ್ಷದಿಂದ ದೇಶಪಾಂಡೆ ನಗರದ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಇತ್ತೀಚೆಗೆ ಯುವತಿ ಪ್ರೇಮಿಯಿಂದ ದೂರವಾಗುಲು ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಯುವಕ, ಯವತಿಯ ಕುತ್ತಿಗೆಗೆ ಮೂರು ಬಾರಿ ಹೊಡೆದಿದ್ದಾನೆ. ಈ ಮೂಲಕ ಇಮ್ತಿಯಾಜ್ ತನ್ನ ಪ್ರೇಮಿಯ ಹತ್ಯೆಗೆ ಯತ್ನಿಸಿದ್ದಾನೆ.
ಘಟನೆ ನಡೆಯುತ್ತಿದ್ದಂತ ಸ್ಥಳದಲ್ಲಿದ್ದ ಮಂಜುನಾಥ ಎಂಬ ವ್ಯಕ್ತಿ ಯುವತಿಯ ರಕ್ಷಣೆ ಮಾಡಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರೋಪಿಯನ್ನ ಉಪನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.