– ಮನೆಯಿಂದ ಓಡಿ ಹೋಗಿ ಮದ್ವೆಯಾಗಿದ್ದ ಜೋಡಿ
– ಮದುವೆಗೆ ಎರಡೂ ಕುಟುಂಬಗಳಿಂದ ವಿರೋಧ
ಹೈದರಾಬಾದ್: ಪ್ರೀತಿಸಿದ ಯುವಕನನ್ನ ಮದುವೆ ಆಗಿದ್ದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ ಜಂಗಾಂವ್ ಜಿಲ್ಲೆಯ ಕೊಡಕಂಡ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೊಡಕಂಡ್ಲ ಗ್ರಾಮದ 20 ವರ್ಷದ ಶ್ರೀಲೇಖಾ ಆತ್ಮಹತ್ಯೆಗೆ ಶರಣಾದ ಯುವತಿ. ಶ್ರೀಲೇಖಾ ತನ್ನದೇ ಗ್ರಾಮದ ಮನೋಹರ್ (20) ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಶ್ರೀಲೇಖಾ ಮತ್ತು ಮನೋಹರ್ ಡಿಸೆಂಬರ್ 16ರಂದು ಹೈದರಾಬಾದ್ ಗೆ ಬಂದಿದ್ದರು.
ಡಿಸೆಂಬರ್ 22ರಂದು ಮದುವೆಯಾದ ಜೋಡಿ ಗ್ರಾಮಕ್ಕೆ ಹಿಂದಿರುಗುವ ಮೊದಲು ಪೊಲೀಸರ ರಕ್ಷಣೆ ಕೇಳಿದ್ದರು. ಪೊಲೀಸರು ಸಹ ಎರಡೂ ಕುಟುಂಬದ ಸದಸ್ಯರನ್ನ ಕರೆಸಿ ಮನವೊಲಿಸುವ ಕೆಲಸ ಮಾಡಿದ್ದರು. ಆದ್ರೆ ಮದುವೆ ಒಪ್ಪಿರಲಿಲ್ಲ. ಎರಡೂ ಕುಟುಂಬಗಳ ನಡುವೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಶ್ರೀಲೇಖಾಳನ್ನ ಜನಗಮಾ ಸಖಿ ಕೇಂದ್ರದಲ್ಲಿ ಇರಿಸಿದ್ದರು.
ಪೋಷಕರು ಇಬ್ಬರ ಮದುವೆ ಒಪ್ಪದ ಹಿನ್ನೆಲೆ ಮಾನಸಿಕವಾಗಿ ನೊಂದಿದ್ದ ಶ್ರೀಲೇಖಾ ಸಖಿ ಕೇಂದ್ರದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.