ಲಕ್ನೋ: ಪ್ರೀತಿ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಹುಡುಗಿ ಮನೆಯವರು ಹುಡುಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್‍ನಲ್ಲಿ ನಡೆದಿದೆ.
ಸೌರಭ್ ಕುಮಾರ್(17) ಮೃತ ಹುಡುಗನಾಗಿದ್ದಾನೆ. ಈತ ಗ್ರಾಮದ ಪಕ್ಕದಲ್ಲೇ ಇರುವ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಶುಕ್ರವಾರ ರಾತ್ರಿ ಸೌರಭ್ ತನ್ನ ಗರ್ಲ್‍ಫ್ರೆಂಡ್ ಮನೆಗೆ ಹೋಗಿದ್ದಾಗ ಇಬ್ಬರೂ ಒಟ್ಟಿಗೇ ಸಿಕ್ಕಿಬಿದ್ದು, ಪ್ರಾಣ ಬಿಟ್ಟ ದುರ್ಘಟನೆ ರೇಪುರಾ ರಾಮಪುರಶಾಹ್ ಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ: ವಿಶ್ವ ಚಾಂಪಿಯನ್‍ಶಿಪ್ – ಕುಸ್ತಿಯಲ್ಲಿ ಸ್ವರ್ಣ ಗೆದ್ದ ಪ್ರಿಯಾ ಮಲಿಕ್
ಹುಡುಗ, ಹುಡುಗಿಯನ್ನು ಒಟ್ಟಿಗೆ ನೋಡಿ ಕೋಪಗೊಂಡ ಹುಡುಗಿಯ ಕುಟುಂಬದವರು, ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಮರ್ಮಾಂಗವನ್ನೂ ಕತ್ತರಿಸಿದ್ದಾರೆ. ಅಷ್ಟರಲ್ಲಿ ಹುಡುಗನ ಕುಟುಂಬದವರಿಗೆ ವಿಷಯ ಗೊತ್ತಾಗಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ಹುಡುಗನನ್ನು ದಾಖಲು ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ. ಅಂದೇ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೌರಭ್ ಕುಮಾರ್ ಕುಟುಂಬದವರು ಇದರಿಂದ ತೀವ್ರವಾಗಿ ಕೋಪಗೊಂಡಿದ್ದಲ್ಲದೆ, ಹುಡುಗಿಯ ಮನೆಯ ಎದುರೇ ಸೌರಭ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಪ್ರೀತಿ ವಿಚಾರಕ್ಕೇ ಬಾಲಕನನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.