– 18 ಬಾರಿ ಲೈಂಗಿಕ ಕಿರುಕುಳದ ದೂರು
ಬೆಂಗಳೂರು: ಪ್ರಿಯತಮ ಹಾಗೂ ಆತನ ಸ್ನೇಹಿತನಿಂದಲೇ ಮಾಡೆಲ್ ಒಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಪ್ರಮೋದ್ ಎಂಬಾತ ಪ್ರೀತಿಸುವುದಾಗಿ ಮಾಡೆಲ್ ಹಿಂದೆ ಬಿದ್ದಿದ್ದನು. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಯುವತಿಯನ್ನು ಸಂಪರ್ಕ ಮಾಡಿ ಆಕೆಯ ಮೊಬೈಲ್ ನಂಬರ್ ಕೂಡ ಪಡೆದಿದ್ದನು. ಅಲ್ಲದೆ ಆಕೆಯ ಜೊತೆ ನಿರಂತರವಾಗಿ ಮಾತನಾಡಿ ಇನ್ನಷ್ಟು ಹತ್ತಿರವಾಗಿದ್ದನು.
ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ಅಲ್ಲದೆ ಪ್ರಮೋದ್, ನಿನ್ನೊಂದಿಗೆ ತುಂಬಾ ಮಾತನಾಡಬೇಕು ಎಂದು ಪುಸಲಾಯಿಯಿಸಿ ಯುವತಿಯನ್ನು ಯಶವಂತಪುರ ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಹೀಗೆ ಬಂದವಳಿಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಯಲು ಕೊಟ್ಟಿದ್ದಾನೆ.
ಇತ್ತ ಪ್ರಿಯತಮ ನೀಡಿದ ಜ್ಯೂಸ್ ಕುಡಿದ ಯುವತಿಗೆ ಪ್ರಜ್ಞೆ ತಪ್ಪಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಪ್ರಮೋದ್ ಹಾಗೂ ಆತನ ಗೆಳೆಯ ಧನಂಜಯ್ ಸೇರಿ ಯುವತಿ ಮೇಲೆ ತಮ್ಮ ಕಾಮ ತೃಷೆ ತೀರಿಸಿಕೊಂಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಯುವತಿಯೊಂದಿಗಿನ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಕೂಡ ಸೆರೆ ಹಿಡಿದಿದ್ದಾರೆ.
ಇಷ್ಟೆಲ್ಲಾ ಆದ ಕೆಲ ದಿನಗಳ ಬಳಿಕ ಯುವತಿಗೆ ಕರೆ ಮಾಡಿ, ನಿನ್ನ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಹೀಗೆ ಯುವತಿಯನ್ನು ಬೆದರಿಸಿ 18 ಬಾರಿ ಕರೆಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಯುವಕ ಕಿರುಕುಳದಿಂದ ನೊಂದ ಯುವತಿ ಇದೀಗ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.