– ದೈಹಿಕ ಶಿಕ್ಷಣ ಶಿಕ್ಷಕನಾಗಿರೋ ಗೆಳೆಯ
ಮುಂಬೈ: ತನ್ನ ಪ್ರಿಯತಮನ ಸಹಾಯದಿಂದ ತಂದೆಯ ಬಳಿಯಿದ್ದ 19 ಲಕ್ಷ ಮೌಲ್ಯದ ಆಭರಣ ಕದ್ದು ಸಿಕ್ಕಿಬಿದ್ದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಂಬೈನ ಓಶಿವಾರಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಜ್ಮಾ ಖುರೇಷಿ(21) ಹಾಗೂ ಚರಂದೀಪ್ ಸಿಂಗ್ ಅರೋರಾ(35) ಎಂದು ಗುರುತಿಸಲಾಗಿದೆ. ಅರೋರಾ ವರ್ಸೋವಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 31ರಂದು ಉಜ್ಮಾ ಮನೆಯಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಓಶಿವಾರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಯಿತು. ಆ ಬಳಿಕ ಈಕೆ ಅರೋರಾ ಜೊತೆ ಓಡಿಹೋಗಿದ್ದಾಳೆ ಎಂಬ ಸುದ್ದಿ ಸಿಕ್ಕಿತ್ತು ಎಂದು ತಂದೆ ಉಮ್ರಾಡರಾಜ್ ಖುರೇಶಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಉಮ್ರಾಡರಾಜ್ ಹೋಟೆಲ್ ನಡೆಸುತ್ತಿದ್ದು, 65 ತೊಲ ಚಿನ್ನ ಹಾಗೂ 10 ಲಕ್ಷ ರೂ. ಕಳವಾಗಿರುವುದು ಗಮನಕ್ಕೆ ಬಂದಿದೆ. ಇತ್ತ ಜುಲೈ 23ರಂದು ಮಗಳು ಉಜ್ಮಾ ಲಾಕರ್ ಕೀಯನ್ನು ನೀಡುವಂತೆ ಕೇಳಿಕೊಂಡಿದ್ದು ಇದೇ ವೇಳೆ ಅವರಿಗೆ ನೆನಪಾಗುತ್ತದೆ.
ಸ್ನೇಹಿತನ ಕುಟುಂಬಕ್ಕೆ ಕೋವಿಡ್ 18 ಬಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ತಮ್ಮ ಚಿನ್ನವನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಂಡು ನಂತರ ವಾಪಸ್ ನೀಡುವಂತೆ ಮಗಳಲ್ಲಿ ಹೇಳಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮಗಳು ಇಲ್ಲ, ಇತ್ತ ಚಿನ್ನವೂ ಇಲ್ಲ. ಇದರಿಂದ ಎಚ್ಚೆತ್ತ ಉಮ್ರಾಡರಾಜ್ ಕೂಡಲೇ ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ತಿಳಿಸಿದ್ದಾರೆ.
ತಂದೆ ನೀಡಿದ ದೂರಿನಂತೆ ಪೊಲೀಸರು ಮಗಳ ವಿರುದ್ಧ ಐಪಿಸಿ ಸೆಕ್ಷನ್ 378(ಕಳ್ಳತನ), 406 (ವಿಶ್ವಾಸ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ತಾಂತ್ರಿಕ ಸಹಾಯದಿಂದ ಆರೋಪಿಗಳು ಪಂಜಾಬ್‍ನಲ್ಲಿ ಇದ್ದ ಸ್ಥಳದ ಮಾಹಿತಿ ಕಲೆ ಹಾಕಿ, ನಂತರ ನಮ್ಮ ತಂಡವನ್ನು ಕಳುಹಿಸಿದೆವು. ಸೀತಾ ನಿವಾಸದಲ್ಲಿ ಆರೋಪಿಗಳು ಸಿಕ್ಕಿಬಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಆರೋಪಿಗಳ ಕೈಯಿಂದ ಹಣ, ಚಿನ್ನ ಹಾಗೂ ಲಾಕರ್ ಕೀಯನ್ನು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.