ಚಾಮರಾಜನಗರ: ಪ್ರಿಯಕರನ ಜೊತೆಗೂಡಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿ ಬಳಿಕ ನಾಪತ್ತೆ ನಾಟಕ ಆಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಘವಪುರ ಗ್ರಾಮದ ನಾಗರಾಜನಾಯ್ಕ (40) ಮೃತ ವ್ಯಕ್ತಿ. ಹೆಂಡತಿ ಪದ್ಮಾ (26) ಹಾಗೂ ಈಕೆಯ ಪ್ರಿಯಕರ ಮಣಿಕಂಠ (26) ನನ್ನು ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಸೆಪ್ಟೆಂಬರ್ 11ರ ಮಧ್ಯರಾತ್ರಿ ತೊಂಡವಾಡಿ ಜಮೀನೊಂದರಲ್ಲಿ ರಾಸಲೀಲೆ ಆಡುತ್ತಿದ್ದ ವೇಳೆ ಗಂಡನ ಕೈಗೆ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪ್ರಿಯಕರನ ಜೊತೆಗೂಡಿ ಕಲ್ಲಿನಲ್ಲಿ ಹೊಡೆದು ಕೊಂದು ನಾಗರಾಜನಾಯ್ಕನನ್ನು ಕಳಲೆ ಕಾಲುವೆಗೆ ಬಿಸಾಡಿದ್ದಾರೆ. ಆ ಬಳಿಕ ಮೈಸೂರಿಗೆ ತೆರಳುತ್ತೇನೆಂದು ಹೋದವರು ಇನ್ನೂ ಬಂದಿಲ್ಲ ಎಂದು ಆರೋಪಿಗಳಿಬ್ಬರು ಸೆ.16ರಂದು ಬೇಗೂರು ಠಾಣೆಗೆ ದೂರು ನೀಡಿದ್ದಾರೆ.
ಪದ್ಮಾ ಮಾತಿನಲ್ಲಿ ಕಪಟ ಇರುವುದನ್ನು ಗುರುತಿಸಿದ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಾಗ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳು ಶವವನ್ನು ಎಸೆದಿದ್ದೇವೆ ಎಂದು ಹೇಳಿರುವುದರಿಂದ ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರ್ ನಡೆಸಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.