ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಮೂರು ವರ್ಷಗಳಿಂದ ಭೂಕುಸಿತ ಮತ್ತು ಪ್ರವಾಹದಿಂದ ನಲುಗಿ ಹೋಗಿದೆ. ಅದರಲ್ಲೂ ಕಾವೇರಿ ಪ್ರವಾಹದಿಂದ ನಲುಗಿ ಹೋಗುತ್ತಿರುವ ನೂರಾರು ಕುಟುಂಬಗಳಿಗೆ ಇಂದಿಗೂ ಪರಿಹಾರವೇ ಸಿಕ್ಕಿಲ್ಲ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ, ಕರಡಿಗೋಡು ಕಕ್ಕಟ್ಟುಕಾಡು ಗ್ರಾಮಗಳ ಸ್ಥಿತಿ ಇದಾಗಿದೆ. 2019 ರಲ್ಲಿ ಊಹೆಗೂ ಮೀರಿ ಉಕ್ಕಿ ಹರಿದಿದ್ದ ಕಾವೇರಿ ಪ್ರವಾಹದಲ್ಲಿ ನೂರಾರು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡಿದ್ದವು. ಅದರಲ್ಲಿ ಸೋಮವಾರಪೇಟೆ ತಾಲೂಕಿನ ಕಾವೇರಿ ನದಿ ತೀರದ 45ಕ್ಕೂ ಹೆಚ್ಚು ಕುಟುಂಬಗಳಿಗೆ ಅಭ್ಯತ್ ಮಂಗಲ ಬಳಿ ನಿವೇಶನ ಗುರುತಿಸಲಾಗಿದೆ.
ವಿರಾಜಪೇಟೆ ತಾಲೂಕಿನ 65ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ವರ್ಷವಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಕಳೆದ ಬಾರಿಯ ಪ್ರವಾಹದಲ್ಲಿ ಮನೆಯ ಎಲ್ಲಾ ವಸ್ತುಗಳು ಕೊಚ್ಚಿ ಹೋಗಿದ್ದವು. ಅದಕ್ಕಾಗಿ ತಾತ್ಕಾಲಿಕ ಪರಿಹಾರ ಅಂತ 10 ಸಾವಿರ ಕೊಟ್ಟಿದ್ದು ಬಿಟ್ಟರೆ ಶಾಶ್ವತ ಪರಿಹಾರ ಮಾತ್ರ ದೊರೆತಿಲ್ಲ. ಸದ್ಯ ನಾವಿರುವ ಸ್ಥಳದಿಂದ 70 ಕಿಲೋ ಮೀಟರ್ ದೂರದಲ್ಲಿ ಯಾವುದೇ ಸೌಲಭ್ಯವೇ ಇಲ್ಲದ ಕಡೆ ನಿವೇಶನ ನೀಡಲು ಮುಂದಾಗಿದ್ದ ಜಿಲ್ಲಾಡಳಿತ ಬಳಿಕ ಸುಮ್ಮನಾಗಿ ಬಿಟ್ಟಿದೆ ಎನ್ನೋದು ಸ್ಥಳೀಯರ ಆರೋಪ.
ಈ ಬಾರಿಯೂ ಮತ್ತೆ ಉಕ್ಕಿ ಹರಿದಿದ್ದ ಪ್ರವಾಹದಲ್ಲಿ ಹಲವು ಕುಟುಂಬಗಳು ಅಳಿದುಳಿದಿದ್ದನ್ನೂ ಕಳೆದುಕೊಂಡಿವೆ. ಮನೆ ಗೋಡೆಗಳು ಸಂಪೂರ್ಣವಾಗಿ ಭಾಗವಾಗಿದ್ದು, ಯಾವಾಗ ಮನೆಗಳು ಕುಸಿದು ಬೀಳುತ್ತವೆಯೋ ಎನ್ನೋ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾತ್ರಿ ಮಲಗಿದಾಗ ಮನೆ ಕುಸಿದು ಬಿದ್ದಲ್ಲಿ ಎಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತೆ ಎನ್ನೋ ಭಯದಲ್ಲಿ ಮನೆಯ ಯಾರಾದೊಬ್ಬರು ರಾತ್ರಿ ಎಚ್ಚರದಿಂದ ಇದ್ದು ಕಾದುಕೊಂಡು ಪ್ರಾಣ ಕೈಯಲ್ಲಿ ಹಿಡಿದು ಬದುಕುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನನಗೆ ಗಂಡ ಮಕ್ಕಳು ಯಾರೂ ಇಲ್ಲ. ನನ್ನ ಪಾಲಿಗೆ ಇದ್ದ ಮನೆಯೂ ಕೊಚ್ಚಿ ಹೋಗಿದೆ.
ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಭೂಕುಸಿತ ಮತ್ತು ಪ್ರವಾಹದಿಂದ ನಲುಗಿರುವ ಹತ್ತಾರು ಕುಟುಂಬಗಳು ಇಂದಿಗೂ ಶಾಶ್ವತ ಪರಿಹಾರವಿಲ್ಲದೆ ಬಿದ್ದು ಹೋಗಿರುವ ಮನೆಗಳ ಗೋಡೆ ಮರೆಯಲ್ಲಿ ಆತಂಕದಿಂದ ಬದುಕು ದೂಡುತ್ತಿದ್ದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.