ಗದಗ: ಪ್ರವಾಹ ಭೀತಿಗೆ ಗದಗದ ಮಲಪ್ರಭಾ ನದಿ ತೀರ ಪ್ರದೇಶದಲ್ಲಿರುವ ಜನರು ಊರು ತೊರೆಯುತ್ತಿದ್ದಾರೆ.
ನವಿಲು ತೀರ್ಥ(ರೇಣುಕಾ) ಜಲಾಶಯದಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಹಿನ್ನಲೆ ಜಿಲ್ಲೆಯ ನದಿ ಪಾತ್ರ ಗ್ರಾಮಗಳಿಗೆ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಿಲ್ಲಾಡಳಿತದಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯ ಡಂಗೂರ ಸಾರಲಾಯಿತು.
ಗಂಟೆ ಗಂಟೆಗೂ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ನೀರಿನ ಹರಿವು ಹೆಚ್ಚಾಗುತ್ತಿದೆ. ಲಖಮಾಪೂರ, ವಾಸನ, ಬೆಳ್ಳೆರಿ, ಕೊಣ್ಣೂರ, ಬೂದಿಹಾಳ, ಕಲ್ಲಾಪೂರ, ಅಮರಗೋಳ, ಮೆಣಸಗಿ, ಹೊಳೆಮಣ್ಣೂರ ಹೀಗೆ ಅನೇಕ ಗ್ರಾಮಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ನರಗುಂದ ತಹಶೀಲ್ದಾರ್ ಎ.ಡಿ ಅಮರವಡಗಿ, ಪೊಲೀಸ್ ಸಿಬ್ಬಂದಿ, ತಾ.ಪಂ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ, ಮಲಪ್ರಭಾ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದರು. ಇದನ್ನೂ ಓದಿ: ರಸ್ತೆ ಬದಿ ನಿಂತು ಸೀಬೆಕಾಯಿ ಸವಿದ ಪ್ರಹ್ಲಾದ್ ಜೋಶಿ
ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿ, ಜನರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವೊಲಿಸಲು ಯತ್ನಿಸಿದರು. ತಹಶೀಲ್ದಾರ್ ಹಾಗೂ ಪೊಲೀಸರು ಲಖಮಾಪುರ, ವಾಸನ, ಬೂದಿಹಾಳ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಜನರು ಎತ್ತಿನಬಂಡಿ, ಟ್ಯ್ರಾಕ್ಟರ್, ಬೊಲೆರೋ ವಾಹನಗಳ ಮೂಲಕ ಜಾನುವಾರುಗಳೊಂದಿಗೆ ಊರು ತೊರೆಯಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಪ್ರವಾಹ ಬಂದಾಗಲೆಲ್ಲಾ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿ ಪಾತ್ರದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅನೇಕ ಬೆಳೆ ಹಾನಿಯಾಗುತ್ತದೆ.