ನವದೆಹಲಿ: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಜನರು ತತ್ತರಿಸಿದ್ದಾರೆ. ಈ ನಡುವೆ ಇಂದು ರಾಜ್ಯ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಎಲ್ಲ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ರಾಜ್ಯ ಏಕ ಕಾಲದಲ್ಲಿ ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ರಾಜ್ಯದ ಸಚಿವರ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಸಭೆಗೆ ಗೈರಾಗಲಿದ್ದು, ಸಿಎಂ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಲಿದ್ದಾರೆ.
ಬೆಳಗ್ಗೆ 11:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಪ್ರವಾಹದಿಂದ ಸೃಷ್ಟಿಯಾಗಿರುವ ಅನಾಹುತ, ನಷ್ಟ ಪರಿಹಾರ ಕಾರ್ಯಗಳ ಮಾಹಿತಿ ಪಡೆದುಕೊಳ್ಳಿದ್ದಾರೆ. ಇದರ ಜೊತೆಗೆ ಕೊರೊನಾ ನಿಯಂತ್ರಣ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಪಿಎಂ ಜೊತೆಗಿನ ಸಭೆ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್ ಈಗಾಗಲೇ ಎಲ್ಲ ಪ್ರವಾಹ ಪೀಡಿತ ಹಾಗೂ ಅತಿ ಹೆಚ್ಚು ಕೊರೊನಾ ಕಾಣಿಸಿಕೊಂಡ ರಾಜ್ಯಗಳಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಈ ಎಲ್ಲ ಮಾಹಿತಿಯನ್ನ ಪಿಎಂ ಮೋದಿ ಮುಂದೆ ಪ್ರಸುತ್ತ ಪಡಿಸಲಿದ್ದಾರೆ.
ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಹಾಗೂ ಕೇರಳದ ಸಿಎಂ ಜೊತೆಗೆ ಪ್ರಧಾನಿ ಮೋದಿ ಮಾತನಾಡಲಿದ್ದು, ಇದಕ್ಕೆ ಪ್ರತ್ಯೇಕ ಸಮಯ ಮೀಸಲಿಡಲಾಗಿದೆ. ಪ್ರಧಾನಿ ಮೋದಿ ಸಭೆಯಿಂದ ರಾಜ್ಯದ ಪರಿಸ್ಥಿತಿ ಸರ್ಕಾರದ ಗಮನಕ್ಕೆ ಬಂದಲ್ಲಿ ಮುಂದೆ ರಾಜ್ಯಕ್ಕೆ ಹೆಚ್ಚು ಪರಿಹಾರ ಸಿಗುವ ನಿಟ್ಟಿನಲ್ಲೂ ಸಹಕಾರಿಯಾಗಲಿದೆ. ಸಚಿವರು ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಬೇಕಿದೆ.