– ಕಾಟಾಚಾರದ ಭೇಟಿಗೆ ಯಾದಗಿರಿ ಜನತೆ ಅಸಮಾಧಾನ
ಯಾದಗಿರಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ನಿರಾಶ್ರಿತರ ಗೋಳು ಕೇಳಬೇಕಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಭೇಟಿ ನೆಪದಲ್ಲಿ ರೋಡ್ ಶೋ ನಡೆಸಿದ್ದಾರೆ.
ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಸಮಸ್ಯೆ ಕೇಳುವ ಬದಲು ಪಕ್ಷದ ಕಾರ್ಯಕರ್ತರ ಭೇಟಿ ಮಾಡಿದ್ದಾರೆ. ಇದೇ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಸಹ ಮಾಡಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಗ್ರಾಮಕ್ಕೆ ಕಾಟಾಚಾರ ಭೇಟಿ ನೀಡಿದ ನಂತರ, ಹುರಸಗುಂಡಗಿಗೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳದೆ, ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಸರ್ಕಲ್ ಉದ್ಘಾಟನೆ ಮಾಡಿದರು.
ನಂತರ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡದೆ, ರಾಜ್ಯ ಹೆದ್ದಾರಿ ಮಧ್ಯದಲ್ಲಿಯೇ ವಾಹನ ನಿಲ್ಲಿಸಿ ಜನರತ್ತ ಕೈಬಿಸಿದರು. ಈ ವೇಳೆ ನಿರಾಶ್ರಿತರು ನಮಗೂ ಪರಿಹಾರ ಕಲ್ಪಿಸಬೇಕೆಂದು ನೋವು ತೊಡಿಕೊಳ್ಳಲು ಮುಂದಾದರು. ಈ ವೇಳೆ ಜನರ ಮಾತು ಕೇಳಿಸಿಕೊಳ್ಳದ ಸಿದ್ದರಾಮಯ್ಯ, ರೋಡ್ ಶೋ ನಡೆಸಿ ಸ್ಥಳದಿಂದ ಕಾಲ್ಕಿತ್ತರು. ನಂತರ ಯಾದಗಿರಿ ನಗರದಲ್ಲಿರುವ ಮಾಜಿ ಎಂಎಲ್ ಸಿ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ನಿವಾಸಕ್ಕೆ ಭೇಟಿ ನೀಡಿ, ದಸರಾ ಹಬ್ಬದ ಪ್ರಯುಕ್ತ ಹೋಳಿಗೆ ಊಟ ಸವಿದಿದ್ದಾರೆ.