ಹಾವೇರಿ: ದೊಡ್ಡ ಪ್ರಮಾಣದ ಮಳೆ ಕಾರಣ ಜಿಲ್ಲೆಯ ಹಲವು ಕೆರೆಕಟ್ಟೆಗಳು ಒಡೆದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ ರೂ.10 ಸಾವಿರ ಪರಿಹಾರ ನೀಡಲಾಗುವುದು. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಗೃಹ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಪ್ರವಾಹ ಹಾಗೂ ಅತಿವೃಷ್ಟಿ ಪರಿಶೀಲನೆಗಾಗಿ ಶನಿವಾರ ಶಿಗ್ಗಾಂವ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಮದ್ವತಿ, ವರದಾ ಹಾಗೂ ಧರ್ಮಾ ನದಿ ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗಿ ವಿವಿಧ ಗ್ರಾಮಗಳ ಜಮೀನಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ನೀರು ನುಗ್ಗಿ ಮನೆಗಳು ಕುಸಿದಿವೆ. ಈ ಮನೆಗಳ ಸಂಪೂರ್ಣ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಹಾಗೂ ಮನೆಗಳ ಸರ್ವೇ ಕಾರ್ಯ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶಿಗ್ಗಾಂವ ತಾಲೂಕಿನಲ್ಲಿ ಕೆರೆಗಳು ಹೆಚ್ಚಾಗಿದ್ದು, ಶ್ಯಾಬಳ, ಶ್ಯಾಡಂಬಿ, ಹುಣಸಿಕಟ್ಟೆ ಕೆರೆಗಳು ಬ್ರೀಚ್ ಆಗಿದ್ದು, ಕೆರೆಗಳ ನೀರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ 32 ಮನೆಗಳು ಕುಸಿದಿವೆ. ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಮಾಸೂರ ಭಾಗದಲ್ಲಿ ತುಂಬಾ ಹಾನಿಯಾಗಿದೆ. ಹಾನಿಯಾದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕೆರೆಗಳ ಬ್ರೀಚ್‍ಗೆ ಹಣ ನೀಡಿ ಜಿಲ್ಲೆಯ ಎಲ್ಲ ಕೆರೆಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಲ್ಲ. ಬರುವ ವಾರದಲ್ಲಿ ಇನ್ನೂ ಹೆಚ್ಚಿನ ಯೂರಿಯಾ ತರಿಸಲಾಗುವುದು ಹಾಗೂ ರೇಖೆಗಳನ್ನು ಬುಕ್ ಮಾಡಲಾಗಿದೆ ಎಂದು ತಿಳಿಸಿದರು.
ಯೂರಿಯಾಗಾಗಿ ರೈತರ ಪರದಾಟ
ಜಿಲ್ಲೆಯ ಅನ್ನದಾತರು ಮಳೆರಾಯನ ಆರ್ಭಟಕ್ಕೆ ಕಂಗಾಲಾಗಿದ್ದಾರೆ. ಕಳೆದ ಮೂರು ದಿನ ನಿರಂತರವಾಗಿ ಮಳೆ ಆಗಿದೆ. ಹೀಗಾಗಿ ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಯೂರಿಯಾ ಗೊಬ್ಬರ ಪಡೆಯಲು ರೈತರು ಪರದಾಡಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಎಪಿಎಂಸಿ ಆವರಣದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಇವತ್ತು ಮಳೆರಾಯ ಸ್ವಲ್ಪ ಬಿಡುವು ಕೊಟ್ಟಿದ್ದಾನೆ. ಹೀಗಾಗಿ ಯೂರಿಯಾ ಗೊಬ್ಬರ ಪಡೆಯಲು ನೂಕು ನುಗ್ಗಲು ಆಗಿದೆ.
ನಿರಂತರ ಮಳೆಯಿಂದ ರಕ್ಷಿಸಿಕೊಳ್ಳಲು ಯೂರಿಯಾ ಗೊಬ್ಬರಕ್ಕಾಗಿ ಅನ್ನದಾತರು ಮುಗಿಬಿದ್ದು, ಪೊಲೀಸರು ನಿಯಂತ್ರಣ ಮಾಡಲು ಹರಸಾಹಸಪಟ್ಟಿದ್ದಾರೆ. ಮಳೆಗೆ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರಿಗೆ ಯೂರಿಯಾ ಗೊಬ್ಬರ ಅಗತ್ಯವಿದೆ. ಹೆಚ್ಚು ಯೂರಿಯಾ ಗೊಬ್ಬರದ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.