ಗದಗ: ಜಿಲ್ಲೆನಲ್ಲಿ ನರೆಹಾವಳಿಗೆ ಸಿಕ್ಕ ಅನ್ನದಾತರ ಬದುಕು ಹೇಳತೀರದಾಗಿದ್ದು, ಕಬ್ಬು, ಮೆಕ್ಕೆಜೋಳ, ಪೆರಲ ಹಣ್ಣು ಸೇರಿ ವಿವಿಧ ಬೆಳೆಗಳು ನೀರುಪಾಲಾಗಿವೆ. ಇದರಿಂದಾಗಿ ರೈತರು ಸಂಪೂರ್ಣ ನಷ್ಟು ಅನುಭವಿಸುವಂತಾಗಿದೆ.
Advertisement
ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ 16 ಗ್ರಾಮಗಳು ಮಲಪ್ರಭಾ ಪ್ರವಾಹಕ್ಕೆ ಒಳಗಾಗಿವೆ. ಈ ಪ್ರವಾಹದಿಂದ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಮೆಕ್ಕೆಜೋಳ, ಪೇರಲ, ಸೂರ್ಯಕಾಂತಿ, ಹೆಸರು, ಕಬ್ಬು, ಜೋಳ ಹೀಗೆ ಅನೇಕ ಬೆಳೆಗಳು ಜಲಾವೃತವಾಗಿವೆ. ಕೆಲ ಬೆಳೆಗಳು ಇನ್ನೇನು ಕಟಾವಿಗೆ ಬರಬೇಕು ಅನ್ನುವ ಸಂದರ್ಭದಲ್ಲೇ ರೌದ್ರ ಮಳೆ ಶುರುವಾಗಿ ಪ್ರವಾಹ ಉಂಟಾಗಿದೆ. ಈ ಮೂಲಕ ರೈತರ ಬೆಳೆಗಳನ್ನು ನುಂಗಿ ನೀರು ಕುಡಿದಿದೆ.
Advertisement
Advertisement
ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿ, ರೈತರು ತಲೆ ಮೇಲೆ ಕೈ ಹೊತ್ತು ಕುಳಿತರೂ ಯಾವೊಬ್ಬ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ರೈತ ಬಳಿ ಬಂದಿಲ್ಲ, ಕಷ್ಟ ಕೇಳಿಲ್ಲ. ನೊಂದ ರೈತರು ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಪ್ರವಾಹ ಸಂಭವಿಸಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು.
Advertisement
ಪದೇ ಪದೇ ಪ್ರವಾಹಕ್ಕೊಳಗಾದ ನದಿ ಪಾತ್ರದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸಾಲಸೂಲ ಮಾಡಿ ಹತ್ತಾರು ಸಾವಿರ ರೂಪಾಯಿ ಖರ್ಚುಮಾಡಿ ಬೆಳೆದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿರುವುದನ್ನು ನೋಡಿ ಕಣ್ಣೀರಿಡುವಂತಾಗಿದೆ.