ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನ ಕಟ್ಟಿಕೊಳ್ತಿರುವ ಕೊಡಗು ಜನರು

Public TV
2 Min Read
KODAGU RE BUILD NAMMA GGRAMA 2022 1

-ವಾಟ್ಸಪ್ ಗ್ರೂಪ್ ಮೂಲಕ ಸಂಘಟಿತ ಅಭಿವೃದ್ಧಿ ಮಂತ್ರ
-ಭಾವನಾತ್ಮಕ ಕರೆಗೆ ಗ್ರಾಮಸ್ಥರ ಶ್ರಮದಾನ

ಕೊಡಗು: ಕಳೆದ ಎರಡು ವರ್ಷಗಳಿಂದ ಪ್ರವಾಹ ಕೊಡಗು ಜಿಲ್ಲೆಯ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಇದೀಗ ಮತ್ತೆ ಮಳೆಗಾಲ ಆರಂಭಗೊಂಡಿದ್ದು, ಜಿಲ್ಲೆಯ ಜನರು ತಾವೇ ತಮ್ಮ ಗ್ರಾಮದ ರಸ್ತೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ವಾಟ್ಸಪ್ ಗ್ರೂಪ್ ನೀಡಿದ ಭಾವನಾತ್ಮಕ ಕರೆಗೆ ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ ಗ್ರಾಮಸ್ಥರು ಸಾಥ್ ನೀಡುವ ಮೂಲಕ ಕೊಚ್ಚಿ ಹೋಗಿರೋ ಸೇತುವೆಗಳನ್ನು ನಿರ್ಮಿಸುತ್ತಿದ್ದಾರೆ.

KODAGU RE BUILD NAMMA GGRAMA 2022 2

ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಪುಟ್ಟ ಜಿಲ್ಲೆ ಕೊಡಗು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಇನ್ನಿಲ್ಲದ ಅವಾಂತರವನ್ನೇ ಸೃಷ್ಟಿಸಿದೆ. ಸಾಕಷ್ಟು ಆಸ್ತಿ ಹಾಗೂ ಪ್ರಾಣ ಹಾನಿಯನ್ನು ಉಂಟು ಮಾಡಿದೆ. ಹೀಗೆ 2018-19 ರವರೆಗೆ ಜಿಲ್ಲೆಯನ್ನು ಪ್ರವಾಹದ ಭೀತಿಯಲ್ಲೇ ಮುಳುಗಿಸಿರುವ ಕೊಡಗು ಚೇತರಿಸಿಕೊಂಡಂತೆ ಮಳೆಗಾಲದಲ್ಲಿ ಅತಿವೃಷ್ಟಿ ಸೃಷ್ಟಿಸುತ್ತಿದೆ.

KODAGU RE BUILD NAMMA GGRAMA 2022 4

ಮಹಾ ಮಳೆಗೆ ಮನೆ, ಸಂಪರ್ಕ ರಸ್ತೆಗಳು ಹಾಗೆಯೇ ಗ್ರಾಮದ ಎಲ್ಲೆಯನ್ನೇ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರವೂ ಸಾಕಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಸಂತ್ರಸ್ತರಿಗೆ ಸುರಕ್ಷಿತವಾದ ಸರ್ಕಾರಿ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುತ್ತಿದೆ. ಇನ್ಫೋಸಿಸ್, ರೋಟರಿ ಮತ್ತು ರಿ ಬಿಲ್ಡ್ ಕೊಡಗು ಹೀಗೆ ಹಲವು ಖಾಸಗಿ ಸಂಸ್ಥೆಗಳು ಮಾನವೀಯ ನೆಲೆಗಟ್ಟಿನ ಮೇಲೆ ನೆರವು ನೀಡುತ್ತಿವೆ. ಆದರೆ ಇವೆಲ್ಲವುದಕ್ಕೂ ಮೀರಿ ಹುಟ್ಟೂರು ಎನ್ನುವ ಅಭಿಮಾನದಿಂದ ಗ್ರಾಮಸ್ಥರೇ ವಾಟ್ಸಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಅಸ್ತವ್ಯಸ್ತವಾಗಿರುವ ಗ್ರಾಮದ ರಸ್ತೆಗಳು, ಹಳೆ ಕಾಲದ ಸೇತುವೆಗಳನ್ನು ಪುನರ್ ನವೀಕರಣಕ್ಕೆ ಕೈ ಜೋಡಿಸಿದ್ದಾರೆ.

KODAGU RE BUILD NAMMA GGRAMA 2022 3

ನಮ್ಮ ಗ್ರಾಮ 2022: 2018 ಹಾಗೂ 19ರಲ್ಲಿ ಸುರಿದ ಧಾರಾಕಾರ ಮಳೆಗೆ 2 ನೇ ಮೊಣ್ಣಂಗೇರಿಯೂ ನಲುಗಿತ್ತು. ಈ ಹಿನ್ನೆಲೆಯಲ್ಲಿ ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಾನ ಮನಸ್ಕರು ಸೇರಿ ‘ನಮ್ಮ ಗ್ರಾಮ 2022’ ಎಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಹಾನಿಗೆ ಒಳಗಾಗಿರುವ ಸ್ಥಳಗಳನ್ನು ಪುನರ್ ನಿರ್ಮಿಸುತ್ತಿದ್ದಾರೆ. ಗ್ರಾಮದ ವಿವೇಕ ಗಿರಿ ಬಸ್ ನಿಲ್ದಾಣದ ಬಳಿಯ ಸೇತುವೆ 2018ರಲ್ಲಿ ಸುರಿದ ಮಳೆಯ ರಭಸಕ್ಕೆ ಕೊಚ್ಚಿ ಹೋಗಿತ್ತು. ಹಿರಿಯರು ಕಟ್ಟಿದ ಸೇತುವೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಅನಿವಾರ್ಯ ಇರುವುದರಿಂದ ಸೇತುವೆ ಸುಭದ್ರತೆ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ತಾವೆಲ್ಲರೂ ಸರಿಯಾದ ಸಮಯಕ್ಕೆ ಶ್ರಮದಾನಕ್ಕೆ ಹಾಜರಾಗಬೇಕು ಅನ್ನುವ ಭಾವನಾತ್ಮಕ ಅಲೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಅಲ್ಲದೆ ವಾಟ್ಸಪ್ ಅಡ್ಮಿನ್ ನೀಡುವ ಸೂಚನೆಗಳನ್ನು ತಪ್ಪದೆ ಸದಸ್ಯರು ಪಾಲಿಸುತ್ತಿದ್ದಾರೆ.

KODAGU RE BUILD NAMMA GGRAMA 2022 6

ಸೇತುವೆಗಳ ದುರಸ್ಥಿ: ಕೆಲಸಕ್ಕೆ ಹಾಜರಾಗುವ ಮೊದಲು ಹೆಸರನ್ನು ನೋಂದಾಯಿಸಿಕೊಂಡು ಕೆಲಸಕ್ಕೆ ಅಗತ್ಯವಿರುವ ಗುದ್ದಲಿ, ಪಿಕಾಸು, ಹಾರೆ, ಮುಟ್ಟ ತೆಗೆದುಕೊಂಡು ಹೋಗುತ್ತಾರೆ. ಗ್ರಾಮದ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಲಾಕ್‍ಡೌನ್‍ನಿಂದ ಕೆಲಸ ಸ್ಥಗಿತವಾಗಿದೆ. ಮಳೆಗಾಲ ಸಮೀಪ ಇರುವುದರಿಂದ ಸ್ಥಳೀಯರ ಅನುಕೂಲಕ್ಕೆ ತಾತ್ಕಾಲಿಕವಾಗಿ ಸೇತುವೆ ಪೂರ್ಣಗೊಳಿಸಬೇಕು ಅಂದುಕೊಂಡು ಸಮಾನ ಮನಸ್ಕರೇ ಕೈ ಜೋಡಿಸಿದ್ದಾರೆ.

KODAGU RE BUILD NAMMA GGRAMA 2022 7

ಕೋವಿಡ್-19 ಮಧ್ಯೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಜವಾವ್ದಾರಿ ವಹಿಸಿಕೊಂಡು ಪರಿಪೂರ್ಣ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮದ ಚಂದ್ರಗಿರಿಯ ಕೃಷ್ಣರಾವ್‍ರ ಜಾಗದಲ್ಲಿ ಹಾದು ಹೋಗುವ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ, ವಿವೇಕಗಿರಿ ಬಳಿಯ ಸೇತುವೆ, ತಡೆಗೋಡೆ ಸೇರಿದಂತೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ಥಿ ಮಾಡಲಾಗಿದೆ. ಗ್ರಾಮಸ್ಥರು ಕೆಲಸ ಮಾಡಿ ಜಿಲ್ಲೆಗೆ ಮಾದರಿ ಅಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *